ದಿಢೀರ್ ಬಾಗಲಕೋಟೆ ಜಿಲ್ಲೆಗೆ ಭೇಟಿ ನೀಡಿ ಸಂಚನ ಮೂಡಿಸಿದ ವಿನಯ್ ಕುಲಕರ್ಣಿ

ಬಾಗಲಕೋಟೆ: ಮಾಜಿ ಸಚಿವ ವಿನಯ್ ಕುಲಕರ್ಣಿ ಜೈಲಿನಿಂದ ಬಿಡುಗಡೆಯಾಗಿ ಬೆಳಗಾವಿಯಲ್ಲಿ ಅದ್ದೂರಿ ಸ್ವಾಗತ ಕೋರಿದ ಬೆನ್ನಲ್ಲೇ ಬಾಗಲಕೋಟೆ ಜಿಲ್ಲೆಗೆ ದಿಢೀರ್ ಭೇಟಿ ನೀಡಿ ಸಂಚಲನ ಮೂಡಿಸಿದ್ದಾರೆ.
ಧಾರವಾಡದ ಮಾಜಿ ಸಚಿವ ವಿನಯ್ ಕುಲಕರ್ಣಿ ಮಾಜಿ ಜಿ ಪಂ ಸದಸ್ಯ ಯೋಗಿಶ್ ಗೌಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜೈಲುಪಾಲಾಗಿದ್ದರು. ಇವತ್ತು ಜೈಲಿನಿಂದ ಬಿಡುಗಡೆಗೊಂಡಿರುವ ವಿನಯ್ ಕುಲಕರ್ಣಿ ಬೆಳಗಾವಿಯಲ್ಲಿ ಅದ್ದೂರಿ ಸ್ವಾಗತ, ಮೆರವಣಿಗೆ ನಡೆಸಿ ಬೆಂಗಳೂರಿಗೆ ಬಾಗಲಕೋಟೆ ಜಿಲ್ಲೆ ಮಾರ್ಗವಾಗಿ ತೆರಳುವ ವೇಳೆ ಮುಧೋಳ ತಾಲೂಕಿನ ಲೋಕಾಪೂರದಲ್ಲಿ ಉದಪುಡಿ ಅವರ ಮನೆಗೆ ಭೇಟಿ ನೀಡಿ, ಈಚೆಗೆ ಕೋವಿ ಡ್ ನಿಂದ ಮೃತಪಟ್ಟಿದ್ದ ಮಾಜಿ ಜಿಪಂ ಸದಸ್ಯ ಮಹಾಂತೇಶ ಉದಪುಡಿಯ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಲೋಕಾಪುರದಿಂದ ಬಾಗಲಕೋಟೆ ಮಾರ್ಗವಾಗಿ ಸಂಚರಿಸಿ, ಇಳಕಲ್ ನಗರದಲ್ಲಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಮನೆಗೆ ಭೇಟಿ ನೀಡಿ ವೀಣಾ ಕಾಶಪ್ಪನವರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿ, ಉಪಹಾರ ಸೇವಿಸಿದರು. ಇದೇ ವೇಳೆ ಲಿಂಗಾಯತ ಪಂಚಮಸಾಲಿ ಸಂಘದ ರಾಷ್ಟ್ರೀಯ ಅಧ್ಯಕ್ಷರು ಆಗಿರುವ ವಿಜಯಾನಂದ ಕಾಶಪ್ಪನವರ್ ಜೊತೆಗೆ ಕೆಲಕಾಲ ಉಭಯ ಕುಶಲೋಪರಿ ನಡೆಸಿದರು.
ಇಳಕಲ್ ನಿಂದ ಬೆಂಗಳೂರು ಕಡೆಗೆ ಮಾಜಿ ಸಚಿವ ವಿನಯ್ ಕುಲಕರ್ಣಿ ತೆರಳಿದ್ದಾರೆ.ಇನ್ನು ವಿನಯ್ ಕುಲಕರ್ಣಿ ಬಾದಾಮಿ , ಬನಶಂಕರಿ ದೇಗುಲಕ್ಕೆ ಭೇಟಿ ನೀಡಿ ವಾಸ್ತವ್ಯ ಹೂಡುವವರಿದ್ದರು. ಆದರೆ ಕೊನೆ ಕ್ಷಣದಲ್ಲಿ ಬಾದಾಮಿ ಭೇಟಿ ರದ್ದುಗೊಳಿಸಿ ಬೆಂಗಳೂರಿಗೆ ತೆರಳಿದ್ದಾರೆ.




