ಮಣಿಪಾಲದ ಟ್ಯಾಪ್ಮಿಯಿಂದ ಅಂಗಡಿಬೆಟ್ಟು ನೆಲ್ಲಿಕಟ್ಟೆ ರಸ್ತೆ ದುರಸ್ತಿಗಾಗಿ ಪ್ರತಿಭಟನೆ

ಉಡುಪಿ: ಮಣಿಪಾಲದ ಟ್ಯಾಪ್ಮಿಯಿಂದ ಅಂಗಡಿಬೆಟ್ಟು ನೆಲ್ಲಿಕಟ್ಟೆ ಮೂಲಕ ಕಾಜಾರಗುತ್ತು ಸಂಪರ್ಕಿಸುವ ರಸ್ತೆಯ ಕಾಮಗಾರಿ ಸಂಪೂರ್ಣವಾಗದೇ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆ ಆಗುತ್ತಿದೆ. ಈ ರಸ್ತೆಯ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಬೇಕೆಂದು ಆಗ್ರಹಿಸಿ ಹಿರೇಬೆಟ್ಟು ಗ್ರಾ.ಪಂ ನ ಮುಂಭಾಗ ಸಾರ್ವಜನಿಕರು ಪ್ರತಿಭಟನೆ ನಡೆಸಿ ಪಂ. ಪಿಡಿಓ ಗೆ ಮನವಿ ಪತ್ರ ನೀಡಿದರು.
ಬೆಳಿಗ್ಗೆ ಹಿರೇಬೆಟ್ಟು ಗ್ರಾ.ಪಂ ಕಾರ್ಯಲಯದ ಮುಂಭಾಗ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ತಾ.ಪಂ ಸದಸ್ಯ ಲಕ್ಷ್ಮೀನಾರಾಯಣ ಪ್ರಭು ಆಡಳಿತ ವ್ಯವಸ್ಥೆಯ ಲೋಪದಿಂದಾಗಿ ಈ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ. ಕಾಮಗಾರಿ ಪೂರ್ಣಗೊಳ್ಳದೇ ಜನರ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ ಎಂದು ಪಂಚಾಯತ್ ನ ಗಮನಕ್ಕೆ ತಂದಿದ್ದೇವೆ. ಆದರೆ ಪಂಚಾಯತ್ ನವರು ಮುತುವರ್ಜಿ ವಹಿಸದೇ ನಿರ್ಲಕ್ಷ್ಯ ತೋರಿದ್ದಾರೆ. ಈ ರಸ್ತೆಯ ಮೂಲಕವೇ ಇಲ್ಲಿನ ನಿವಾಸಿಗಳು ಮಣಿಪಾಲ, ಉಡುಪಿಗೆ ತೆರಳಬೇಕಾಗಿದೆ. ಆದರೆ ಜೆ.ಸಿ.ಬಿಯಿಂದ ರಸ್ತೆಯನ್ನು ಅಗಲ ಮಾಡಿದ್ದು, ಮಳೆಯಿಂದ ರಸ್ತೆಗೆ ಹಾಕಿದ ಮಣ್ಣು ಕೊಚ್ಚಿ ಹೋಗಿ ನಡು ರಸ್ತೆಯಲ್ಲಿ ಹೊಂಡಗಳು ಸೃಷ್ಠಿಯಾಗಿದೆ. ಬೈಕ್ ಸವಾರರಿಗಂತೂ ಈ ರಸ್ತೆಯಲ್ಲಿ ಸಾಗುವುದು ದುಸ್ಸಾಹಸವಾಗಿದೆ ಎಂದು ಹೇಳಿದರು.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಪಂ.ಸದಸ್ಯ ಯತೀಶ್ ಶೆಟ್ಟಿ ಹಿರೇಬೆಟ್ಟು ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ಜನ ಓಡಾಡುತ್ತಾರೆ. ಆದರೆ ಈಗ ಯಾರೇ ಓಡಾಡಿದರೂ ರಸ್ತೆಯ ಅವಸ್ಥೆ ಕಂಡು ಜನಪ್ರತಿನಿಧಿಗಳಿಗೆ ಶಾಪ ಹಾಕುತ್ತಿದ್ದಾರೆ. ರಿಕ್ಷಾದವರು ಈ ರಸ್ತೆಗೆ ಬಾಡಿಗೆಗೆ ಬರುತ್ತಿಲ್ಲ. ಸಾಲು ಸಾಲು ಸಮಸ್ಯೆಗಳಿದ್ದರೂ ಜನರಿಂದ ಆಯ್ಕೆಯಾದವರು ಮೌನವಾಗಿದ್ದಾರೆ. ಸಂಭಂದ ಪಟ್ಟವರು ಈ ರಸ್ತೆಯ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.




