ಸರ್ಫೇಸಿ ಕಾಯ್ದೆ ರದ್ದಾಗಲಿ; ಮಾಜಿ ಸಚಿವ ಬಿ.ಬಿ ನಿಂಗಯ್ಯ ಆಗ್ರಹ

ಚಿಕ್ಕಮಗಳೂರು: ಸರ್ಫೇಸಿ ಕಾಯ್ದೆ ರೈತರಿಗೆ ಮಾರಕವಾಗಿದ್ದು ಸರ್ಕಾರ ಇದನ್ನು ಕೂಡಲೇ ರದ್ದುಗೊಳಿಸಲಿ ಎಂದು ಮಾಜಿ ಸಚಿವ ಬಿ ಬಿ ನಿಂಗಯ್ಯ ಆಗ್ರಹಿಸಿದರು.
ಮೂಡಿಗೆರೆಯ ಮಿನಿ ವಿಧಾನಸೌಧದ ಆವರಣದಲ್ಲಿ ಯುವ ಜನತಾದಳದಿಂದ ಕೇಂದ್ರ ಸರ್ಕಾರದ ವಿರುದ್ಧ ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿ, ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ರೈತರ ಪರವಾಗಿ ಒಂದೇ ಒಂದು ಉತ್ತಮ ಕೆಲಸವನ್ನು ಮಾಡಿಲ್ಲ.ರೈತರ ಪಾಲಿಗೆ ಮಾರಕವಾದ ಕಾಯ್ದೆಗಳನ್ನು ತಂದಿದ್ದಾರೆ ಎಂದರು.
ಸರ್ಫೇಸಿ ಕಾಯ್ದೆಯು ರೈತರನ್ನು ನೇಣಿಗೇರಿಸುವ ಕಾಯ್ದೆಯಾಗಿದೆ. ಇದನ್ನು ಅಸ್ತ್ರವಾಗಿ ಬಳಸಿಕೊಂಡು ಬ್ಯಾಂಕಿನವರು ರೈತರ ಮೇಲೆ ಸವಾರಿ ಮಾಡುತ್ತಿದ್ದಾರೆ. ಕೂಡಲೇ ಸರ್ಫೇಸಿ ಕಾಯ್ದೆಯನ್ನು ಸರ್ಕಾರ ರದ್ದುಮಾಡಲಿ ಎಂದು ಆಗ್ರಹಿಸಿದರು.
ಕಳೆದೆರಡು ವರ್ಷಗಳಿಂದ ಅತಿವೃಷ್ಟಿ ಉಂಟಾಗುತ್ತಿದ್ದು ರೈತರು ಬೆಳೆದ ಬೆಳೆಗಳನ್ನು ಕೈಗೆ ಪಡೆಯಲಾರದೆ ಸಂಕಷ್ಟದಲ್ಲಿದ್ದಾರೆ. ಸರ್ಫೇಸಿ ಕಾಯ್ದೆಯಿಂದ ಬ್ಯಾಂಕಿನ ನೋಟೀಸು ಪ್ರತಿದಿನ ರೈತರ ಮನೆ ಬಾಗಿಲಿಗೆ ಬಂದು ಅವರ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿದೆ. ಮೊದಲೇ ರೈತರು ಭೀತಿಗೊಳಗಾಗಿದ್ದಾರೆ, ಈ ಸಮಯದಲ್ಲಿ ರೈತರ ಬದುಕಿನ ಜೊತೆಗೆ ಚೆಲ್ಲಾಟ ಆಡುವುದು ಸರಿಯಲ್ಲ ಎಂದು ಗುಡುಗಿದರು.
ತಹಸೀಲ್ದಾರ್ ನಾಗರಾಜು ಅವರ ಮುಖಾಂತರ ಕೇಂದ್ರ ಸರಕಾರಕ್ಕೆ ಮನವಿಪತ್ರ ಕಳುಹಿಸಲಾಯಿತು.
ಯುವ ಜನತಾದಳದ ಜಿಲ್ಲಾಧ್ಯಕ್ಷ ವಿನಯ್ ಕುಮಾರ್, ತಾಲೂಕು ಅಧ್ಯಕ್ಷ ಸಂದೀಪ್, ನೂತನ್, ಮನು, ರತನ್ ಊರುಬಗೆ, ಪ್ರಸಾದ್, ರಾಜೇಶ್, ಮಂಜುನಾಥ್, ಪ್ರಕಾಶ್, ಸಂದೇಶ್ ಇದ್ದರು.




