ಮಾಸ್ಕ್, ಗ್ಲೌಸ್ ಇಲ್ಲದೆ ಎಂಥಾ ಆಡಳಿತ ನಡೆಸ್ತೀರಿ?: ಅಧಿಕಾರಿಗಳಿಗೆ ಸಿಎಂ ತೀವ್ರ ತರಾಟೆ

ಮಂಗಳೂರು: ಮಾಸ್ಕ್ ಲಭ್ಯವಿಲ್ಲ ಅಂತೀರಾ..? ಮಾಸ್ಕ್, ಗ್ಲೌಸ್ ಇಲ್ಲದೆ ಎಂಥಾ ಆಡಳಿತ ನಡೆಸ್ತೀರಿ ಇಲ್ಲಿ? ಆರೋಗ್ಯ ಕಾರ್ಯಕರ್ತರಿಗೆ ಅಗತ್ಯ ಸವಲತ್ತು ಒದಗಿಸಲು ನಿಮ್ಮಿಂದ ಸಾಧ್ಯವಿಲ್ಲವಾ? ಅಷ್ಟೂ ಕಾಮನ್ಸೆನ್ಸ್ ಬೇಡವಾ? ಎಂದು ಸಿಎಂ ಬಸವರಾಜ ಬೊಮ್ಮಾಯಿ ಕೋವಿಡ್ ನಿರ್ವಹಣೆ ಕುರಿತು ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಕೋವಿಡ್ ನಿರ್ವಹಣೆಗೆ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಕಾರ್ಯಕರ್ತರು ಧರಿಸುವ ಪಿಪಿಇ ಕಿಟ್, ಮಾಸ್ಕ್ ಹಾಗೂ ಗ್ಲೌಸ್ಗಳ ಕೊರತೆಯಿದೆ ಎಂದು ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಯು.ಟಿ. ಖಾದರ್ ದೂರಿದಾಗ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಪ್ರತಿಕ್ರಿಯಿಸಿ, ಪಿಪಿಇ ಕಿಟ್ ಸಾಕಷ್ಟು ಲಭ್ಯವಿದೆ. ಗ್ಲೌಸ್ ಮತ್ತು ಎನ್ 95 ಮಾಸ್ಕ್ ಕೊರತೆಯಿದೆ. ಪೂರೈಸಲು ಕ್ರಮ ವಹಿಸಲಾಗಿದೆ ಎಂದು ಸಬೆಗೆ ಉತ್ತರ ಕೊಟ್ಟರು.
ಇದರಿಂದ ಕುಪಿತರಾದ ಸಿಎಂ ಬೊಮ್ಮಾಯಿ ಜಿಲ್ಲಾಧಿಕಾರಿ ಹಾಗೂ ಆರೋಗ್ಯಾಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಎಸ್ ಡಿಆರ್ ಎಫ್ ನಿಧಿಯಿಂದ ಇವತ್ತೇ ಅಗತ್ಯ ವಸ್ತುಗಳನ್ನು ಖರೀದಿ ಮಾಡಿ. ಇದರ ಕುರಿತಾಗಿ ಯಾವುದೇ ಸಮರ್ಥನೆ ಕೊಡಬೇಡಿ. ಇವತ್ತೇ ಎಲ್ಲವನ್ನೂ ಖರೀದಿಸಿ ಸಂಜೆಯೊಳಗೆ ನನಗೆ ರಿಪೋರ್ಟ್ ಕೊಡಿ ಎಂದು ಸೂಚಿಸಿದರು.
ದಕ್ಷಿಣ ಕನ್ನಡದಲ್ಲಿ ಪಾಸಿಟಿವಿಟಿ ದರ ಹೆಚ್ಚಾಗಿದೆ. ಹೋಂ ಐಷೋಲೇಷನ್ನಲ್ಲಿರುವ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ಗಳಿಗೆ ಸ್ಥಳಾಂತರಿಸಬೇಕು. ಸೋಂಕಿತರಲ್ಲಿ ಶೇ.90ರಷ್ಟು ಮಂದಿ ಮನೆಯಲ್ಲೇ ಇದ್ದಾರೆ. ಇದು ಇನ್ನಷ್ಟು ಸೋಂಕು ಹರಡಲು ಕಾರಣವಾಗಿದ್ದು, ಎಲ್ಲರನ್ನೂ ಸಿಸಿಸಿಗೆ ಸ್ಥಳಾಂತರಿಸಲು ಕ್ರಮ ಜರುಗಿಸಿರಿ. ಎಲ್ಲೂ ಆಕ್ಸಿಜನ್ ಕೊರತೆಯಾಗದಂತೆ ನಿಗಾ ವಹಿಸಿರಿ. ಕೋವಿಡ್ ಕೇರ್ ಗಳಲ್ಲಿ ವೈದ್ಯರು, ಆರೋಗ್ಯ ಸಿಬ್ಬಂದಿಗಳು, ಮೆಡಿಸನ್, ಆಕ್ಸಿಜನ್ ಸೇರಿದಂತೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳನ್ನು ಸಿಎಂ ಎಚ್ಚರಿಸಿದರು.
