ಕೆ-ಸೆಟ್ ಪರೀಕ್ಷೆ ಅಕ್ರಮ; ಮೈಸೂರು ವಿವಿ ಕುಲಪತಿಗೆ ಸಂಸದ ಪತ್ರ

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ ನಡೆಸಿದ 2021ನೇ ಸಾಲಿನ ಕೆ-ಸೆಟ್ ಪರೀಕ್ಷೆಯಲ್ಲಿ ಅಕ್ರಮಗಳನ್ನು ಎಸಗಿರುವುದು ಸಾಕ್ಷಿ ಸಮೇತ ನನ್ನ ಗಮನಕ್ಕೆ ಬಂದಿದೆ ಎಂದು ಸಂಸದ ಪ್ರತಾಪ್ ಸಿಂಹ ಅವರು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
ವಿಶ್ವವಿದ್ಯಾನಿಲಯ ಬಿಡುಗಡೆ ಮಾಡಿರುವ ಕೆ-ಸೆಟ್ ಪರೀಕ್ಷೆಯ ಮಾದರಿ ಉತ್ತರ ಪತ್ರಿಕೆಗಳನ್ನು ಗಮನಿಸಿದಾಗ ಮೇಲ್ನೋಟಕ್ಕೆ ಪ್ರಶ್ನೆ ಪತ್ರಿಕೆಯಲ್ಲಿ ನೀಡಲಾಗಿರುವ ಉತ್ತರಗಳ ಆ್ಂಕೆುಯಲ್ಲೇ ಗಂಭೀರ ಲೋಪವಿರುವುದು ಎದ್ದು ಕಾಣುತ್ತಿದೆ ಎಂದು ವಿವಿ ಕುಲಪತಿಗೆ ಸಂಸದ ಪ್ರತಾಪ್ಸಿಂಹ ಬರೆದಿರುವ ಪತ್ರದಲ್ಲಿ ಆರೋಪಿಸಿದ್ದಾರೆ.
ಭವಿಷ್ಯದ ಪದವೀಧರರನ್ನು ತಯಾರು ಮಾಡುವಂತಹ ಉಪನ್ಯಾಸಕರು ಮತ್ತು ಪ್ರಾಧ್ಯಾಪಕರ ಅರ್ಹತೆಯನ್ನು ಅಳೆಯುವ ಕೆ-ಸೆಟ್ ಪರೀಕ್ಷೆ ನಡೆಸುವ ಜವಾಬ್ದಾರಿಯನ್ನು ಮೈಸೂರು ವಿಶ್ವವಿದ್ಯಾನಿಲಯಕ್ಕೆ ರಾಜ್ಯಪಾಲರು ಹಾಗೂ ಉನ್ನತ ಶಿಕ್ಷಣ ಸಚಿವಾಲಯ ಅಪಾರ ವಿಶ್ವಾಸವನ್ನಿಟ್ಟು ನೀಡಲಾಗಿದೆ. ಹಾಗಾಗಿ, ಮೈಸೂರು ವಿವಿ ಕೆ-ಸೆಟ್ನ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಲು ನುರಿತ ಹಾಗೂ ಅನುಭವಿ ಪ್ರಾಧ್ಯಾಪಕರ ಸಮಿತಿಯನ್ನು ಈ ಹಿಂದೆ ರಚನೆ ಮಾಡಿತ್ತು, ಆದರೆ ಪ್ರಸ್ತುತ ಅಂತಹ ಸಮಿತಿಯೇ ಇಲ್ಲದಿರುವುದು ಇನ್ನಿಲ್ಲದ ಅಕ್ರಮಗಳಿಗೆ ಎಡೆಮಾಡಿಕೊಡುತ್ತದೆ ಎಂದು ದೂರಿದ್ದಾರೆ.




