ರಾಜೀನಾಮೆ ಕೊಡುತ್ತೇನೆಂದು ನಾನೆಲ್ಲಿ ಹೇಳಿದ್ದೆ?; ಸಿಎಂ ಜೊತೆ ಚರ್ಚೆ ಬಳಿಕ ಆನಂದ್ ಸಿಂಗ್ ಹೊಸ ರಾಗ

ಬೆಂಗಳೂರು: ರಾಜೀನಾಮೆ ಕೊಡುತ್ತೇನೆ ಎಂದು ನಾನೆಲ್ಲಿ ಹೇಳಿದ್ದೆ ಎಂದು ಆನಂದ್ ಸಿಂಗ್ ಪ್ರಶ್ನಿಸಿದ್ದಾರೆ.
ಬುಧವಾರ ರಾತ್ರಿ ಸಿಎಂ ಬೊಮ್ಮಾಯಿ ಭೇಟಿಯಾಗಿ ಚರ್ಚಿಸಿದ ಬಳಿಕ ಆನಂದ್ ಸಿಂಗ್ ಹೀಗೆ ಪ್ರಶ್ನಿಸುವ ಮೂಲಕ ರಾಜೀನಾಮೆ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.
ರೇಸ್ಕೋರ್ಸ್ ರಸ್ತೆಯ ಖಾಸಗಿ ಅಪಾರ್ಟ್ಮೆಂಟ್ನಲ್ಲಿ ಸಿಎಂ ಬೊಮ್ಮಾಯಿ ಮತ್ತು ಆನಂದ್ ಸಿಂಗ್ ಚರ್ಚಿಸಿದರು. ಸುಮಾರು ಎರಡು ಗಂಟೆಗಳ ಕಾಲ ನಡೆದ ಚರ್ಚೆ ವೇಳೆ ಸಚಿವ ಆರ್ ಅಶೋಕ್ ಮತ್ತು ಸುರಪುರ ಶಾಸಕ ರಾಜುಗೌಡ ಇದ್ದರು.
ಚರ್ಚೆ ಬಳಿಕ ಮಾಧ್ಯಮಗಳೊಡನೆ ಮಾತನಾಡಿದ ಸಿಎಂ ಬೊಮ್ಮಾಯಿ, ಖಾತೆ ಬದಲಾವಣೆಯನ್ನು ಆನಂದ್ ಸಿಂಗ್ ಬಯಸಿದ್ದು ನಿಜ. ಆದರೆ ಅವರಿಗೆ ಸದ್ಯದ ಪರಿಸ್ಥಿತಿ ಬಗ್ಗೆ ವಿವರಿಸಿದ್ದೇನ. ಎಲ್ಲರೂ ಒಗ್ಗಟ್ಟಾಗಿ ಪಕ್ಷವನ್ನು ಮುನ್ನಡೆಸಿಕೊಂಡು ಹೋಗಬೇಕಾದ ಅಗತ್ಯದ ಬಗ್ಗೆ ಅವರಿಗೂ ಮನವರಿಕೆಯಾಗಿದೆ. ಅವರ ಬೇಡಿಕೆ ಏನು ಎಂಬುದರ ಬಗ್ಗೆ ಹೈಕಮಾಂಡ್ ಜೊತೆಗೂ ಚರ್ಚಿಸುವೆ. ಆನಂದ್ ಸಿಂಗ್ ಎಲ್ಲವನ್ನೂ ಅರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಆಗಸ್ಟ್ 15ರಂದು ವಿಜಯಪುರದಲ್ಲಿ ಆನಂದ್ ಸಿಂಗ್ ಅವರೇ ಧ್ವಜಾರೋಹಣ ಮಾಡಲಿದ್ದಾರೆ. ನನ್ನ ಈ ಆದೇಶವನ್ನು ಆನಂದ್ ಸಿಂಗ್ ಒಪ್ಪಿಕೊಂಡಾಗಲೇ ಎಲ್ಲವೂ ಬಗೆಹರಿದಿದೆ ಎಂದು ಬೊಮ್ಮಾಯಿ ಹೇಳಿದರು.
ಆನಂದ್ ಸಿಂಗ್ ಮಾತನಾಡಿ, ನನ್ನ ಮನವಿಯನ್ನು ಮುಖ್ಯಮಂತ್ರಿಗಳು ಪರಿಗಣಿಸಿದ್ದಾರೆ. ಎಲ್ಲರೂ ಒಂದಾಗಿ ಹೋಗುವುದು ಮುಖ್ಯ ಎಂದು ಅವರು ಹೇಳಿದ್ದಾರೆ. ನಾನು ಒಪ್ಪಿದ್ದೇನೆ ಎಂದರು.
ರಾಜೀನಾಮೆ ಕೊಡುತ್ತೇನೆ ಎಂದು ನಾನು ಎಲ್ಲಿಯೂ ಹೇಳಿರಲಿಲ್ಲ ಎಂದೂ ಆನಂದ್ ಸಿಂಗ್ ಹೊಸ ರಾಗ ಎಳೆದರು.
ಇದರೊಂದಿಗೆ, ಇಂದು ಬೆಳಗ್ಗೆ ಹೊಸಪೇಟೆಯ ವೇಣುಗೋಪಾಲಸ್ವಾಮಿ ದೇವಾಲಯದಿಂದ ಶುರುವಾದ ಆನಂದ್ ಸಿಂಗ್ ರಾಜಕೀಯ ಪ್ರಹಸನ ಅಂತ್ಯ ಕಂಡಿದೆ. ಆದರೆ ಗೊಂದಲಗಳು ಇನ್ನೂ ಬಗೆಹರಿದಿಲ್ಲ ಎಂಬ ಸುಳಿವು, ಚರ್ಚೆ ವೇಳೆ ಜೊತೆಗಿದ್ದ ಶಾಸಕ ರಾಜುಗೌಡ ಅವರ ಮಾತುಗಳಲ್ಲಿ ಹೌದೊ ಅಲ್ಲವೊ ಎನ್ನುವಂತೆ ಹೊರಬಿದ್ದಿದ್ದಂತೂ ನಿಜ.
