ಶಾಸಕ ಅಪ್ಪಚ್ಚು ರಂಜನ್ ಗೆ ಮಂತ್ರಿಗಿರಿ : ಬೆಂಗಳೂರು ಚಲೋ ಆರಂಭ

ಕೊಡಗು : ಮಡಿಕೇರಿ- ಸೋಮವಾರಪೇಟೆ ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಸಚಿವ ಸ್ಥಾನಕ್ಕೆ ಹಕ್ಕೊತ್ತಾಯಿಸಿ ಬೆಂಗಳೂರು ಚಲೋ ಅಭಿಯಾನಕ್ಕೆ ಚಾಲನೆ ದೊರೆತಿದೆ. ಕುಶಾಲನಗರದ ಮಾರಿಯಮ್ಮ ದೇವಸ್ಥಾನ ಆವರಣದಿಂದ ಆರಂಭವಾದ ಬೆಂಗಳೂರು ಚಲೋ ಅಭಿಯಾನದಲ್ಲಿ ಕ್ಷೇತ್ರದ ವಿವಿದ ಕಡೆಯಿಂದ ಆಗಮಿಸಿದ ಬೆಂಬಲಿಗರು ಭಾಗಿಯಾಗಿದ್ದರು.
100 ಕ್ಕೂ ಹೆಚ್ಚು ಕಾರುಗಳಲ್ಲಿ ತೆರಳಿದ ನೂರಾರು ಬೆಂಬಲಿಗರು ಕ್ಷೇತ್ರದ ಬಹುತೇಕ ಸಮುದಾಯ ಸಂಘಸಂಸ್ಥೆಗಳ ಮನವಿ ಪತ್ರ ದೊಂದಿಗೆ ಬೆಂಗಳೂರಿನತ್ತ ಪಯಣ ಬೆಳೆಸಿದೆ.
ಮಧ್ಯಾಹ್ನ 3.30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಗೆ ಸಮಯ ನಿಗದಿಯಾಗಿದೆ. ನಂತರ ಈ ನಿಯೋಗ ಮಾಜಿ CM ಯಡಿಯೂರಪ್ಪ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಭೇಟಿ ಮಾಡಲಿದೆ.
ಐದು ಬಾರಿ ಶಾಸಕರಾಗಿ ಒಮ್ಮೆ ಸಚಿವರಾಗಿ ಅತ್ಯುತ್ತವಾಗಿ ಕಾರ್ಯನಿರ್ವಹಿಸಿದ್ದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ರಿಗೆ ಮಂತ್ರಿಸ್ಥಾನ ನೀಡಬೇಕು ಎಂದು ಸುಂಟಿಕೊಪ್ಪ ಬಿಜೆಪಿ ಸ್ಥಾನೀಯ ಸಮಿತಿಯವರು ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.
ಕಳೆದ 2018 ರಿಂದ ಕೊಡಗಿನಲ್ಲಿ ಪ್ರವಾಹವಾಗಿ ಅಸ್ತಿಪಾಸ್ತಿ ಮನೆ ಕಳೆದುಕೊಂಡು ಸಂತ್ರಸ್ಥರಾದ ನೆರವಿಗೆ ಧಾವಿಸಿ ಬಂದು ಸಹಾಯಹಸ್ತ ನೀಡಿದ್ದಾರೆ. ಕೊರೊನಾ ಮಹಾಮಾರಿ ಕಳೆದ 2 ವರ್ಷಗಳಿಂದ ತಲೆದೋರಿದ್ದು ಜನರಲ್ಲಿ ಕತ್ತಲು ಮೂಡಿದಾಗ ಕೋವಿಡ್ ಕೇಂದ್ರಕ್ಕೆ ತೆರಳಿ ಸೋಂಕಿತರಿಗೆ ಆಭಯಹಸ್ತ ನೀಡಿದಲ್ಲದೆ ಕೋವಿಡ್ 19 ಹೆಚ್ಚಾಗದಂತೆ ಜಿಲ್ಲಾಡಳಿತಕ್ಕೆ ಸಲಹೆ ಮಾರ್ಗದರ್ಶನ ನೀಡಿದಲ್ಲದೆ ಮಡಿಕೇರಿ ಕ್ಷೇತ್ರದ ಅಭಿವೃದ್ಧಿ ಕೆಲಸಕ್ಕೆ ಬಡವರ ನೆರವಿಗೆ ಬಂದು ಶಾಸಕರಾಗಿ ಜನಾನುರಾಗಿದ್ದಾರೆ.
ಜಾತಿ ಧರ್ಮ ಬೇಧವಿಲ್ಲದೆ ಸೇವೆ ಸಲ್ಲಿಸಿದ್ದ ಅವರಿಗೆ ಮಂತ್ರಿ ಸ್ಥಾನ ನೀಡಬೇಕೆಂದು ಶಕ್ತಿ ಕೇಂದ್ರಗಳ ಅಧ್ಯಕ್ಷರು ನಗರ ವಿವಿಧ ಮೋರ್ಚದ ಪದಾಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಬೆಂಬಲಿತ ಸದಸ್ಯರು ಮತ್ತು ಪ್ರಮುಖರು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.




