ಉದ್ಯೋಗದ ಆಮಿಷವೊಡ್ಡಿ ವಂಚನೆ: ನಕಲಿ ಏಜೆಂಟರ ಬಗ್ಗೆ ಎಚ್ಚರವಹಿಸುವಂತೆ ಎಸ್‍ಪಿ ಮನವಿ

ದಾವಣಗೆರೆ: ರಾಜ್ಯದ ಯುವಕರಿಗೆ ವಿದೇಶಗಳಲ್ಲಿ ಉದ್ಯೋಗ ಕೊಡಿಸುವ ನೆಪದಲ್ಲಿ ವಂಚಿಸುವ ನಕಲಿ ಏಜೆಂಟರ ಹಾವಳಿ ಹೆಚ್ಚಾಗುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಉದ್ಯೋಗದ ಆಮಿಷ ಒಡ್ಡುವ ಅನಧಿಕೃತ ಕಂಪನಿ ಅಥವಾ ವ್ಯಕ್ತಿಗಳ ವಿರುದ್ಧ ಸ್ಥಳೀಯ ಪೊಲಿಸ್ ಠಾಣೆಗಳಲ್ಲಿ ದೂರು ನೀಡಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ. ರಿಷ್ಯಂತ್ ಮನವಿ ಮಾಡಿದ್ದಾರೆ.
ಭಾರತ ಸರ್ಕಾರ ವಿದೇಶಾಂಗ ಸಚಿವಾಲಯದ ಬೆಂಗಳೂರಿನ ಆಫೀಸ್ ಆಫ್ ಪ್ರೊಟೆಕ್ಟರ್ ಆಫ್ ದಿ ಎಮಿಗ್ರೆಂಟ್ಸ್ ಕಚೇರಿ ವತಿಯಿಂದ ಸಾಗರೋತ್ತರ ನೇಮಕಾತಿಗೆ ಸಂಬಂಧಿಸಿದಂತೆ ಅಧಿಕೃತ ನೋಂದಾಯಿತ ಏಜೆಂಟ್ ಕಂಪನಿಗಳ ಪಟ್ಟಿಯನ್ನು ತಯಾರಿಸಿ ಪ್ರಕಟಿಸಿದ್ದು ಸಾರ್ವಜನಿಕರಲ್ಲಿ ಈ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಕಂಪನಿಗಳ ಬಗ್ಗೆ ಮಾಹಿತಿ ನೀಡಲಾಗಿದೆ.
ನೋಂದಾಯಿತ ಸಾಗರೋತ್ತರ ನೇಮಕಾತಿಗೆ ಸಂಬಂಧಿಸಿದ ನೊಂದಾಯಿತ ಕಂಪನಿಗಳನ್ನು ಹೊರತುಪಡಿಸಿ ಯಾವುದಾದರೂ ಅನಧಿಕೃತ ಕಂಪನಿಗಳು ಅಥವಾ ವ್ಯಕ್ತಿಗಳು ಸಾರ್ವಜನಿಕರಿಗೆ ವಿದೇಶಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಆಸೆ, ಆಮಿಷ ಒಡ್ಡಿದಲ್ಲಿ ಅಂತಹ ಕಂಪನಿಗಳ ಅಥವಾ ವ್ಯಕ್ತಿಗಳ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸುವಂತೆ ಮನವಿ ಮಾಡಲಾಗಿದೆ.




