Latestಕೃಷಿಚಿಕ್ಕಮಗಳೂರು

ಮಳೆಗಾಲದಲ್ಲೇ ಹಣ್ಣಾದ ಕಾಫಿ; ಆತಂಕದಲ್ಲಿ ಬೆಳೆಗಾರರು

ವರದಿ: ಕಿರುಗುಂದ ರಫೀಕ್

ಚಿಕ್ಕಮಗಳೂರು: ಮಳೆ ವೈಪರೀತ್ಯದ ಪರಿಣಾಮ ಜಿಲ್ಲೆಯ ಬಹುತೇಕ ಭಾಗದಲ್ಲಿ ಕಾಫಿ ಬೆಳೆ ಹೆಚ್ಚಿನ ಪ್ರಮಾಣದಲ್ಲಿ ಬೇಗನೆ ಹಣ್ಣಾಗತೊಡಗಿದೆ. ಇದು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ.

ಸತತ ಮಳೆ ಸುರಿಯುತ್ತಿದ್ದು, ಬಿಸಿಲು ಕಾಣದ ವಾತಾವರಣದಲ್ಲಿ ಕಾಫಿ ಕೊಯ್ಲಿಗೆ ಬಂದಿದ್ದು, ಈಗ ಕೊಯ್ಲು ಮಾಡಿದರೆ ಒಣಗಿಸಲು ಸಾಧ್ಯವಿಲ್ಲ. ಹಣ್ಣಾದ ಕಾಫಿ ಶೀತದಿಂದ ಕೊಳೆತು ಉದುರಿ ಮಣ್ಣು ಸೇರುತ್ತದೆ. ಮಳೆ ನಡುವೆ ಕಷ್ಟಪಟ್ಟು ಕೊಯ್ಲು ಮಾಡಿ ಒಣಗಿಸಿದರೂ ಗುಣಮಟ್ಟ ಕಳೆದುಕೊಂಡು ಮಾರಾಟ ಮಾಡಲು ಕಷ್ಟವಾಗಲಿದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಮಾರ್ಚ್‌ ತಿಂಗಳಿನಿಂದಲೇ ಮಳೆ ಆರಂಭವಾಗಿದ್ದರಿಂದ ಈ ಬಾರಿ ಕಾಫಿ ಬೆಳೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡಿದೆ. ಏಪ್ರಿಲ್‌ ನಂತರ ಹೂ ಮಳೆ ಸುರಿದು ಹೂ ಅರಳಿದ ನಂತರ ಹದವಾಗಿ ಮಳೆಯಾದರೆ ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಕಾಫಿ ಕೊಯ್ಲಿಗೆ ಬರುತ್ತದೆ. ಅದಕ್ಕೂ ಮೊದಲು ಕಾಫಿ ಹಣ್ಣಾದರೆ, ಫಸಲು ಬೆಳೆಗಾರರಿಗೆ ತುಂಬಾ ನಷ್ಟವಾಗುತ್ತದೆ.

ಮಳೆ ಮುಂದುವರಿದರೆ ಕಾಫಿ ಕೊಯ್ಲು ಮಾಡಲೂ ಕಷ್ಟವಾಗುತ್ತದೆ. ಗಿಡದಲ್ಲೇ ಉಳಿದರೆ ಕೊಳೆರೋಗದಿಂದ ಕಾಫಿ ಉದುರಬಹುದು. ಪ್ರತಿ ವರ್ಷ ಅಕಾಲಿಕ ಮಳೆ ಸೇರಿದಂತೆ ಹವಾಮಾನ ವೈಪ್ಯರಿತ್ಯದಿಂದ ಫಸಲು ನಷ್ಟ ಅನುಭವಿಸುವಂತಾಗಿದೆ. ಆದರೆ, ಬೆಳೆಹಾನಿಗೆ ಯಾವುದೇ ಪರಿಹಾರ ಸಿಗುತ್ತಿಲ್ಲ. ಕಾಫಿ ಬೆಳೆಗಾರರನ್ನು ರಕ್ಷಿಸಬೇಕಾದ ಕಾಫಿ ಮಂಡಳಿಯಿಂದ ಯಾವುದೇ ಅನುದಾನ ಸಿಗುತ್ತಿಲ್ಲ ಎಂದು ಬೆಳೆಗಾರರು ದೂರಿದ್ದಾರೆ.

ಕಾಫಿ ಹಣ್ಣುಗಳು ನೆಲಕ್ಕಚ್ಚುವ ಅಪಾಯ ತಲೆದೋರಿದೆ. ಮಳೆ ಹೀಗೇ ಮುಂದುವರಿದಲ್ಲಿ ಕಾಫಿಯಷ್ಟೇ ಅಲ್ಲದೆ, ಅಡಕೆ, ಕಾಳುಮೆಣಸು, ಬಾಳೆ ಇತ್ಯಾದಿ ಬೆಳೆಗಳನ್ನು ಉಳಿಸಿಕೊಳ್ಳುವುದೇ ಹರಸಾಹಸವಾಗಲಿದೆ.

ಕಾಳು ಮೆಣಸಿಗೂ ಸೂಕ್ತ ಬೆಲೆಯಿಲ್ಲ:

ಕಾಫಿ ಬೆಳೆಯೊಂದಿಗೆ ಉಪಬೆಳೆಯನ್ನಾಗಿ ಬೆಳೆಯುತ್ತಿರುವ ಕಾಳುಮೆಣಸಿಗೆ ಸೂಕ್ತ ಬೆಲೆ ಲಭ್ಯವಾಗದಿರುವುದು ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕಪ್ಪುಚಿನ್ನ ಎಂದು ಕರೆಸಿಕೊಳ್ಳುತ್ತಿದ್ದ ಕಾಳು ಮೆಣಸು ಬೆಳೆಗಿದ್ದ ಧಾರಣೆ ಬೆಳೆಗಾರರನ್ನು ಇಂತಹ ಬೆಲೆ ಏರಿಳಿತದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರ ಕೈ ಹಿಡಿಯುತ್ತಿತ್ತು. ಆದರೆ ಈ ಬಾರಿಯ ಅತೀವೃಷ್ಟಿ ಕಾಫಿಯೊಂದಿಗೆ ಕಾಳು ಮೆಣಸಿನ ಫಸಲನ್ನೂ ನೆಲಕಚ್ಚುವಂತೆ ಮಾಡಿರುವುದರಿಂದ ಕಾಫಿ ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ. ಅನೇಕ ವರ್ಷಗಳಿಂದ ಕಾಳು ಮೆಣಸಿನ ಧಾರಣೆಯೂ ಪಾತಾಳಕ್ಕೆ ಕುಸಿದಿದೆ. ಸರ್ಕಾರದ ನೆರವಿನ ಎದುರು ನೋಡುವಂತಾಗಿದೆ. ತೋಟಗಳ ನಿರ್ವಹಣೆ ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲೆಯ ಬೆಳೆಗಾರರು ಆತಂಕಿತರಾಗಿದ್ದಾರೆ.

“ಅಕಾಲಿಕವಾಗಿ ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳಲ್ಲಿ ಮಳೆ ಬಂದ ಪರಿಣಾಮ ಕಾಫಿ ಹಣ್ಣು ಮಲೆಗಾದಲ್ಲಿ ಹಣ್ಣಾಗಿವೆ. ಇದರಿಂದ ಬೆಳೆಗಾರರು ತೀವ್ರ ನಷ್ಟ ಅನುಭವಿಸುವಂತಾಗಿದೆ. ಮಳೆಯಲ್ಲಿ ಕಾಫಿ ಹಣ್ಣುಗಳು ಉದುರಿಹೋಗಿ, ಕೊಳೆರೋಗ ಆವರಿಸುತ್ತದೆ. ಕೊಯ್ಲು ಮಾಡಲೂ ಸಾಧ್ಯವಿಲ್ಲ ಮತ್ತು ಒಣಗಿಸಲೂ ಸಾಧ್ಯವಿಲ್ಲ.”
-ಅಮರನಾಥ್ ಬಿಳಗುಳ, ಕೃಷಿಕರು

Spread the love

Related Articles

Leave a Reply

Your email address will not be published. Required fields are marked *

Back to top button