ಕಲಬುರ್ಗಿಜಿಲ್ಲಾ ಸುದ್ದಿರಾಜಕೀಯ

ಬಿಜೆಪಿ ಸರ್ಕಾರದಲ್ಲಿ ಕಲ್ಯಾಣ ಕರ್ನಾಟಕಕ್ಕೆ ನಿಲುಕದ ನಕ್ಷತ್ರವಾದ ಮಂತ್ರಿಪಟ್ಟ

ವರದಿ : ವೀರೇಶ ಚಿನಗುಡಿ

ಕಲಬುರ್ಗಿ: ಉತ್ತರ ಕರ್ನಾಟಕದವರೇ ಆದ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಸಂಪುಟದಲ್ಲಿ ಕಲ್ಯಾಣ ಕರ್ನಾಟಕವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಬೀದರ್ ಹಾಗೂ ಕೊಪ್ಪಳ‌ ಜಿಲ್ಲೆಗೆ ತಲಾ ಒಂದು ಸಚಿವ ಸ್ಥಾನ ಕೊಟ್ಟಿದ್ದು ಬಿಟ್ಟರೆ ಈ ಭಾಗದ ಬೆಟ್ಟದಂತ ನಿರೀಕ್ಷೆ ಹುಸಿಗೊಳಿಸಿದ್ದಾರೆ. ಸಚಿವ ಸ್ಥಾನ ಸಿಗದಿದ್ದ ಕಾರಣ ಸಹಜವಾಗಿಯೇ ಈ ಭಾಗದ ಜನರಲ್ಲಿ ಅತೀವ ನಿರಾಸೆ ಮೂಡಿಸಿದೆ.

ಹಿಂದೋಮ್ಮೆ ಏಳು ಸಚಿವರು ಇದ್ದ ಕಲ್ಯಾಣ ಕರ್ನಾಟಕದಲ್ಲಿ ಈಗ ಕೇವಲ ಎರಡು ಮಾತ್ರ ಸಚಿವ ಸ್ಥಾನ ನೀಡಲಾಗಿದೆ. ಕಲ್ಯಾಣ ಕರ್ನಾಟಕದ ಬೀದರ್, ಕೊಪ್ಪಳ ಹೊರತು ಪಡಿಸಿದರೇ, ಕಲಬುರಗಿ, ಯಾದಗಿರಿ, ರಾಯಚೂರ, ಬಳ್ಳಾರಿ, ವಿಜಯನಗರ ಜಿಲ್ಲೆಗೆ ಹೊಸ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್, ಬೀದರ್‌ ಜಿಲ್ಲೆಯ ಔರಾದ್‌ ಶಾಸಕ ಪ್ರಭು ಚವ್ಹಾಣ್ ಇವರಿಬ್ಬರಿಗೆ ಮಾತ್ರ ಸಚಿವ ಸ್ಥಾನ ನೀಡಿ ಮೂಗಿಗೆ ತುಪ್ಪ ಸವರುವ ಕೆಲಸ ಸಿಎಂ ಬಸವರಾಜ ಬೊಮ್ಮಾಯಿ ಮಾಡಿದ್ದಾರೆ ಅಂತ ಈ ಭಾಗದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೆರಳಿದ ಕಲಬುರ್ಗಿ ಜನ

ಒಬ್ಬ ಸಂಸದರು, ಐದು ಜನ ವಿಧಾನ ಸಭೆ ಸದಸ್ಯರು ಹಾಗೂ ಮೂರು ಜನ ವಿಧಾನ ಪರಿಷತ್ ಸದಸ್ಯರನ್ನೊಳಗೊಂಡ ಕಲ್ಯಾಣ ಕರ್ನಾಟಕದ ಕೇಂದ್ರ ಭಾಗವಾದ ಕಲಬುರಗಿ ಜಿಲ್ಲೆಗೆ ಈ ಬಾರಿಯೂ ನೂತನ ಸಚಿವ ಸಂಪುಟದಲ್ಲಿ ಸ್ಥಾನ ಸಿಗದೇ ಇರುವದು ಈ ಭಾಗದ ಜನರಲ್ಲಿ ಅತೀವ ನಿರಾಸೆಯ ಮನೆ ಮಾಡಿಸಿದೆ. ಈ ಹಿಂದೆ ಯಡಿಯೂರಪ್ಪ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದಿದ್ದಕ್ಕೆ ನೊಂದಿದ್ದ ಕಲಬುರ್ಗಿ ಜನತೆ ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿಯೂ ಸಚಿವ ಸ್ಥಾನ ಸಿಗದಿದ್ದಕ್ಕೆ ತೀವ್ರ ಅಸಮಾಧಾನಗೊಂಡಿದ್ದಾರೆ. ನೂತನವಾಗಿ ರಚನೆಗೊಂಡ ಸಂಪುಟದಲ್ಲಿ ಈ ಭಾಗಕ್ಕೆ ಯಾವ ಪ್ರಾತಿನಿಧ್ಯವೂ ಸಿಕ್ಕಿಲ್ಲ ಎನ್ನುವ ಮಾಹಿತಿ ಹೊರಬಿಳುತ್ತಲೇ, ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ್, ರಾಜಕುಮಾರ್ ಪಾಟೀಲ ತೇಲ್ಕೂರ್ ಹಾಗೂ ಸುಭಾಷ ಗುತ್ತೇದಾರ, ಮಾಲಿಕಯ್ಯ ಗುತ್ತೆದಾರ ಅವರುಗಳು ಸಚಿವರಾಗಬಹುದು ಎಂಬ ನಿರೀಕ್ಷೆ ಹುಸಿಯಾಗಿ ಈ ಭಾಗದ ಜನರಲ್ಲಿ ಆಕ್ರೋಶ ಮೂಡಿಸಿದೆ. ಸದ್ಯಕ್ಕೆ ಬೂದಿಮುಚ್ಚಿದ ಕೆಂಡದಂತಿರುವ ಕಲ್ಯಾಣ ಕರ್ನಾಟಕದಲ್ಲಿ ರಾಜಕೀಯ ವ್ಯತಿರಿಕ್ತ ಬದಲಾವಣೆಗಳಾದರೂ ಆಶ್ಚರ್ಯಪಡಬೇಕಾಗಿಲ್ಲ ಅನ್ನೋದು ರಾಜಕೀಯ ವಿಶ್ಲೇಷಕರ ಮಾತಾಗಿದೆ.

ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಅಸಾಧ್ಯ

ಮೈಸೂರು ಪ್ರಾಂತ್ಯ, ಕರಾವಳಿ ಪ್ರದೇಶಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡುವ ರಾಜ್ಯಸರ್ಕಾರದಿಂದ ಹಿಂದುಳಿದ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಅಸಾಧ್ಯ. ತೆಲಂಗಾಣ ಮಾದರಿಯಲ್ಲಿ ನಮಗೆ ಪ್ರತ್ಯೇಕ ರಾಜ್ಯ ಕೊಡಿ ಅಂತ ಪ್ರತ್ಯೇಕ ರಾಜ್ಯದ ಕೂಗು ಈ ಭಾಗದ ಜನರು ಮತ್ತೆ ಮೊಳಗಿಸಲು ಆರಂಭಿಸಿದ್ದಾರೆ.

ಒಟ್ಟಾರೆ ಕುಂತಿ ಪುತ್ರರಿಗೆ ರಾಜ್ಯವಿಲ್ಲ ಎಂಬಂತೆ ಈ ಭಾಗದ ಶಾಸಕರಿಗೆ ಮಂತ್ರಿಪಟ್ಟ ನಿಲುಕದ ನಕ್ಷತ್ರ ವಾಗಿದೆ. ಬಿಜೆಪಿ ಸರ್ಕಾರದ ಈ ಮಲತಾಯಿ ಧೋರಣೆ ಈ ಭಾಗದ ಜನರನ್ನು ಕೆರಳಿಸುವಂತೆ ಮಾಡಿದೆ.

Spread the love

Related Articles

Leave a Reply

Your email address will not be published. Required fields are marked *

Back to top button