ಆಗಸ್ಟ್ 23 ರಿಂದ ಶಾಲೆ-ಕಾಲೇಜು ಆರಂಭ; ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು : ಈ ತಿಂಗಳ 23ರಿಂದ ರಾಜ್ಯದಲ್ಲಿ ಮೊದಲ ಹಂತದಲ್ಲಿ ಒಂಬತ್ತರಿಂದ 12ನೇ ತರಗತಿವರೆಗೆ ಶಾಲಾ-ಕಾಲೇಜುಗಳನ್ನು ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಕೋವಿಡ್ ಕಾರ್ಯಪಡೆ ಮತ್ತು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಸಭೆ ನಂತರ ಅವರು ಈ ವಿಷಯ ತಿಳಿಸಿದರು. ಶಿಕ್ಷಣ ಮತ್ತು ಆರೋಗ್ಯ ತಜ್ಞರ ಸಲಹೆ ಹಾಗೂ ಇತರೆ ರಾಜ್ಯಗಳಲ್ಲಿ ಈ ಸಂಬಂಧ ಕೈಗೊಂಡಿರುವ ನಿರ್ಧಾರಗಳನ್ನು ಗಮನದಲ್ಲಿಟ್ಟುಕೊಂಡು ವಾರದಲ್ಲಿ ತಲಾ ಮೂರು ದಿನಗಳ ಪರ್ಯಾಯ ಬ್ಯಾಚ್ ಗಳಲ್ಲಿ ತರಗತಿಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದರು.
ರಾಜ್ಯದ ಕೋವಿಡ್ ಸ್ಥಿತಿಗತಿಯನ್ನು ಆಧರಿಸಿ, ಎರಡನೇ ಹಂತದಲ್ಲಿ ಪ್ರಾಥಮಿಕ ಶಾಲೆ ಮತ್ತು 8ನೇ ತರಗತಿ ಪ್ರಾರಂಭಿಸುವ ಬಗ್ಗೆ ಆಗಸ್ಟ್ ತಿಂಗಳ ಅಂತ್ಯದಲ್ಲಿ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ವಿದ್ಯಾರ್ಥಿಗಳಿಗೆ ದಿನ ಬಿಟ್ಟು ದಿನ ತರಗತಿ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಶಾಲೆ-ಕಾಲೇಜುಗಳನ್ನು ಪ್ರಾರಂಭಿಸುವ ಸಂದರ್ಭದಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳ ಕುರಿತು ಅಧಿಕೃತವಾಗಿ ಅಧಿಸೂಚನೆ ಹೊರಡಿಸಲಾಗುವುದು ಎಂದು ಹೇಳಿದರು.
ಗಡಿಜಿಲ್ಲೆಗಳಲ್ಲಿ ವಾರಂತ್ಯ ಕರ್ಫ್ಯೂ
ಕೇರಳ ಹಾಗೂ ಮಹಾರಾಷ್ಟ್ರ ಗಡಿ ಜಿಲ್ಲೆಗಳಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿ ಮಾಡಲು ತೀರ್ಮಾನಿಸಲಾಗಿದ್ದು, ರಾತ್ರಿ ಕರ್ಫ್ಯೂ ರಾತ್ರಿ 10ರ ಬದಲು 9ರಿಂದ ಜಾರಿಗೊಳಿಸಲು ನಿರ್ಧರಿಸಲಾಗಿದೆ. ರಾತ್ರಿ ಕರ್ಫ್ಯೂ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
