Breaking NewsLatestರಾಜಕೀಯರಾಷ್ಟ್ರೀಯ

ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್​ಗಳು, ವಕೀಲರ ಮೇಲೆಯೂ ಕಣ್ಣಿಟ್ಟಿದ್ದ ಪೆಗಾಸಸ್

ನವದೆಹಲಿ: ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್​ಗಳು, ಪ್ರಮುಖರ ಕೇಸ್​ಗಳನ್ನು ಹೊಂದಿದ್ದ ವಕೀಲರು ಮತ್ತು ಜಸ್ಟೀಸ್ ಅರುಣ್ ಮಿಶ್ರಾ ಅವರ ಹಳೇ ಫೋನ್ ನಂಬರ್ ಕೂಡ ಪೆಗಾಸಸ್​ನ ಪಟ್ಟಿಯಲ್ಲಿತ್ತೆಂಬುದು ಬಯಲಾಗಿದೆ.

ದಿ ವೈರ್ ಈ ಬಗ್ಗೆ ವರದಿ ಪ್ರಕಟಿಸಿದ್ದು, 2019ರಲ್ಲಿ ಕೆಲ ಕಾಲ ಸುಪ್ರೀಂ ಕೊರ್ಟ್​ನ ಇಬ್ಬರು ರಿಜಿಸ್ಟ್ರಾರ್​ಗಳ ಫೋನ್ ನಂಬರ್ ಮೇಲೆ ಪೆಗಾಸಸ್ ಕಣ್ಣಿಟ್ಟಿತ್ತು ಎಂಬುದನ್ನು ಹೇಳಿದೆ.

ಎನ್​ಕೆ ಗಾಂಧಿ ಮತ್ತು ಟಿಐ ರಜಪೂತ್ ಎಂಬಿಬ್ಬರು ರಿಜಿಸ್ಟ್ರಾರ್​ಗಳು ಅವರ ಫೋನ್ ಗೂಢಚರ್ಯೆ ವ್ಯಾಪ್ತಿಯಲ್ಲಿದ್ದ ಹೊತ್ತಲ್ಲಿ ಅತ್ಯಂತ ನಿರ್ಣಾಯಕವಾದ, ರಿಟ್ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ತೀರ್ಪನ್ನು ಸರಿಯಾಗಿ ಡ್ರಾಫ್ಟ್ ಮಾಡಲಾಗಿದಯೇ ಎಂದು ಪರಿಶೀಲಿಸುವ ಅತ್ಯಂತ ಮಹತ್ವದ ವಿಭಾಗ ಇದಾಗಿದೆ. ಆದರೆ ತಮ್ಮ ಮೇಲೇಕೆ ಕಣ್ಣಿಡಲಾಗಿತ್ತು ಎಂಬುದು ಅವರಿಗೆ ಅಚ್ಚರಿ ತಂದಿದೆ ಎಂದು ದಿ ವೈರ್ ವರದಿ ಹೇಳಿದೆ.

ಪೆಗಾಸಸ್ ಪಟ್ಟಿಯಲ್ಲಿ ಜಸ್ಟೀಸ್ ಅರುಣ್ ಮಿಶ್ರಾ ಹಳೇ ನಂಬರ್:

ಸುಮಾರು 300 ಭಾರತೀಯ ಫೋನ್ ಸಂಖ್ಯೆಗಳು ಪೆಗಅಸಸ್​ನ ರಹಸ್ಯ ಪಟ್ಟಿಯಲ್ಲಿದ್ದವು. ಅದರಲ್ಲಿ ಒಂದು ನಂಬರ್ ನ್ಯಾಯಾಧೀಶರೊಬ್ಬರಿಗೆ ಸೇರಿದ್ದಾಗಿದೆ ಎಂಬುದನ್ನು ಪೆಗಾಸಸ್ ಹಗರಣ ಕುರಿತ ಮಾಲಿಕೆ ಶುರು ಮಾಡಿದ ಹೊತ್ತಲ್ಲೇ ಪ್ರಕಟಿಸಿದ್ದ ದಿ ವೈರ್, ಅದನ್ನೀಗ ಖಚಿತಪಡಿಸಿದೆ.

ರಾಜಸ್ತಾನದ ಆ ಮೊಬೈಲ್ ಸಂಖ್ಯೆ ಮೊದಲು ಜಸ್ಟೀಸ್ ಅರುಣ್ ಮಿಶ್ರಾ ಅವರ ಹೆಸರಲ್ಲಿತ್ತು. 2020ರ ಸೆಪ್ಟೆಂಬರ್​ನಲ್ಲಿ ನಿವೃತ್ತರಾಗಿದ್ದ ಅವರ ನಂಬರ್ 2019ರಲ್ಲಿ ಪೆಗಾಸಸ್ ನದರಿನಲ್ಲಿತ್ತು. 2010ರ ಸೆಪ್ಟೆಂಬರ್​ನಿಂದ 2018ರ ಸೆಪ್ಟೆಂಬರ್​ವರೆಗೆ ಜಸ್ಟಿಸ್ ಮಿಶ್ರಾ ಹೆಸರಲ್ಲಿದ್ದ ಸಂಖ್ಯೆ ಅದಾಗಿತ್ತು.

ಸುಪ್ರೀಂ ಕೋರ್ಟ್ ವಕೀಲರ ಮೇಲೂ ಕಣ್ಣು:

ಸುಪ್ರಿಂ ಕೋರ್ಟ್​ನ 12ಕ್ಕೂ ಅಧಿಕ ವಕೀಲರುಗಳ ಮೇಲೆಯೂ ಗೂಢಚರ್ಯೆಯ ಕಣ್ಣಿತ್ತೆಂಬುದನ್ನು ದಿ ವೈರ್ ಹೇಳಿದೆ. ಮಾನವ ಹಕ್ಕು ಸಂಬಂಧಿತ ಕೇಸ್​ಗಳನ್ನು ನಡೆಸುತ್ತಿದ್ದ ವಕೀಲರ ಹೆಸರುಗಳೂ ಪೆಗಾಸಸ್​ನ ಈ ಪಟ್ಟಿಯಲ್ಲಿದ್ದವು. ಅದರಲ್ಲಿನ ಇಬ್ಬರು ಆ ಹೊತ್ತಲ್ಲಿ ಪ್ರತಿಷ್ಠಿತರ ಕೇಸ್​ಗಳನ್ನು ನಡೆಸುತ್ತಿದ್ದ ವಕೀಲರಾಗಿದ್ದರು ಎಂಬುದು ಕೂಡ ಸ್ಪಷ್ಟವಾಗಿದೆ.

ಆಗಸ್ಟಾ ವೆಸ್ಟ್​ಲ್ಯಾಂಡ್ ಹೆಲಿಕಾಪ್ಟರ್ ಡೀಲ್ ಪ್ರಕರಣದಲ್ಲಿ 2018ರ ಡಿಸೆಂಬರ್​ನಲ್ಲಿ ಭಾರತಕ್ಕೆ ಗಡೀಪಾರಾಗಿದ್ದ ಬ್ರಿಟಿಷ್ ದಲ್ಲಾಳಿ ಕ್ರಶ್ಚಿಯನ್ ಮೈಖೆಲ್ ಅವರ ವಕೀಲರಾಗಿದ್ದ ದೆಹಲಿ ಮೂಲದ ಅಲ್ಜೋ ಪಿ ಜೋಸೆಫ್ ಅವರ ನಂಬರ್ ಕೂಡ ಪೆಗಾಸಸ್ ಪಟ್ಟಿ ಸೇರಿತ್ತು.

ಮೈಖೆಲ್ ಪ್ರಕರಣ ಮೋದಿ ಸರ್ಕಾರಕ್ಕೆ ಮಹತ್ವದ್ದಾಗಿತ್ತು. ಆಗಸ್ಟಾ ಹಗರಣದಲ್ಲಿ ಗಾಂಧಿ ಕುಟುಂಬ ಮತ್ತು ಹಿರಿಯ ಕಾಂಗ್ರೆಸ್ ನಾಯಕರನ್ನು ಸಿಲುಕಿಸಲು ಅವರ ಸಾಕ್ಷ್ಯವನ್ನು ಬಳಸಿಕೊಳ್ಳುವ ಉದ್ದೇಶ ಸರ್ಕಾರಕ್ಕಿತ್ತು.

ಪೆಗಾಸಸ್ ಕಣ್ಣಿಟ್ಟಿದ್ದ ಇನ್ನೊಬ್ಬ ವಕೀಲ ವಿಜಯ್ ಅಗರ್​ವಾಲ್ ಬ್ಯಾಂಕ್ ವಂಚನೆ ಕೇಸ್​ನಲ್ಲಿ ಬೇಕಿದ್ದ ನೀರವ್ ಮೋದಿಯನ್ನು ಪ್ರತಿನಿಧಿಸುತ್ತಿದ್ದವರಾಗಿದ್ದರು. 2018ರ ಆರಂಭದಲ್ಲೇ ಪೆಗಾಸಸ್ ಪಟ್ಟಿ ಸೇರಿದ್ದ ಈ ನಂಬರ್, ಅಗರ್​ವಾಲ್ ಅವರ ಪತ್ನಿ ಬಳಸುತ್ತಿದ್ದುದಾಗಿತ್ತು.

ಬ್ಯಾಂಕ್ ವಂಚನೆ ಕೇಸ್​ನಲ್ಲಿ ಬೇಕಾಗಿದ್ದ ನೀರವ್ ಮೋದಿ 2018ರ ಜನವರಿಯಲ್ಲಿ ಭಾರತ ಬಿಟ್ಟು ಲಂಡನ್ನಿಗೆ ಹಾರಿದಾಗ, ದಾವೋಸ್​ನಲ್ಲಿ ಮೋದಿ ಜೊತೆಗೆ ಗ್ರೂಪ್ ಫೋಟೋದಲ್ಲಿ ನೀರವ್ ಮೋದಿ ಇದ್ದುದು ಬಯಲಿಗೆ ಬಂದು ಸರ್ಕಾರಕ್ಕೆ ತೀವ್ರ ರಾಜಕೀಯ ಇರಿಸುಮುರಿಸು ಉಂಟಾಗಿತ್ತು.

ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಅವರಿಗೆ ಜ್ಯೂನಿಯರ್ ವಕೀಲರಾಗಿದ್ದ ಎಂ ತಂಗದುರೈ ಅವರ ನಂಬರ್​ ಕೂಡ ಪೆಗಾಸಸ್ ಪಟ್ಟಿಯಲ್ಲಿತ್ತು. ತಂಗದುರೈ ನಂಬರ್ ರೋಹ್ಟಗಿ ಹೆಸರಿನಡಿ ಪೆಗಾಸಸ್ ಪಟ್ಟಿಯಲ್ಲಿರುವುದು ಗಒತ್ತಾಗಿದೆ.

ವಜಾ ಪ್ರಶ್ನಿಸಿದ್ದ ಅಧಿಕಾರಿಗಳನ್ನೂ ಬಿಟ್ಟಿರಲಿಲ್ಲ:

ಪೆಗಾಸಸ್ ಒಂದೆಡೆಯಿಂದ ಹೀಗೆ ವಕೀಲರ ಮೇಲೆ ಕಣ್ಣಿಟ್ಟಿದ್ದಾಗಲೇ ತಮ್ಮ ವಜಾ ಆದೇಶ ಪ್ರಶ್ನಿಸಿ ಕೋರ್ಟ್​ ಮೆಟ್ಟಿಲೇರಿದ್ದ ಇಬ್ಬರು ಅಧಿಕಾರಿಗಳನ್ನೂ ಗೂಢಚರ್ಯೆಗೆ ಒಳಪಡಿಸಿತ್ತು. ಅವರಲ್ಲೊಬ್ಬರು ಸಿಬಿಐ ಮಾಜಿ ಮುಖ್ಯಸ್ಥ ಅಲೋಕ್ ವರ್ಮಾ. ಅವರು ಮತ್ತು ಅವರ ಕುಟುಂಬದವರು ಬಳಸುತ್ತಿದ್ದ ಹಲವು ನಂಬರ್​ಗಳು ಪೆಗಾಸಸ್ ಕಣ್ಣಡಿಯಲ್ಲಿದ್ದವು. ಅದೇ ರೀತಿ, ರೀಸರ್ಚ್ ಅಂಡ್ ಅನಲಿಸಿಸ್ ವಿಂಗ್​​ನಿಂದ 2017ರಲ್ಲಿ ಕಡ್ಡಾಯ ನಿವೃತ್ತಿಗೊಳಗಾಗಿದ್ದ ಜಿತೇಂದ್ರಕುಮಾರ್ ಓಝಾ ಅದನ್ನು ಪ್ರಶ್ನಿಸಿ ಸಿಎಟಿ ಮೊರೆಹೋದ ಬೆನ್ನಲ್ಲೇ ಅವರ ಮೇಲೆಯೂ ಪೆಗಾಸಸ್ ಕಣ್ಗಾವಲು ಶುರುವಾಗಿತ್ತು.

Spread the love

Related Articles

Leave a Reply

Your email address will not be published. Required fields are marked *

Back to top button