ದಕ್ಷಿಣ ವಲಯ ಸಮನ್ವಯ; ನಾಳೆ ಅಮಿತ್ ಶಾ ಅಧ್ಯಕ್ಷತೆಯಲ್ಲಿ ತಿರುಪತಿಯಲ್ಲಿ ಮುಖ್ಯಮಂತ್ರಿಗಳ ಸಮ್ಮೇಳನ

ಬೆಂಗಳೂರು: ಭಾನುವಾರ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಅಧ್ಯಕ್ಷತೆಯಲ್ಲಿ ದಕ್ಷಿಣ ವಲಯದ ಸಮನ್ವಯಕ್ಕೆ ಸಂಬಂಧಿಸಿದಂತೆ ತಿರುಪತಿಯಲ್ಲಿ ಮುಖ್ಯಮಂತ್ರಿಗಳ ಸಮ್ಮೇಳನ ನಡೆಯಲಿದೆ,ಸಭೆಯಲ್ಲಿ ನಾನು ಭಾಗವಹಿಸಲಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಗುಜರಾತ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿರುವ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರ ಸನ್ಮಾನ ಕಾರ್ಯಕ್ರಮದ ನಂತರ ಮಾಧ್ಯಮದವರೊಂದಿಗೆ ಸಿಎಂ ಮಾತನಾಡಿದರು.
ಸಾರಿಗೆ ಸಂಸ್ಥೆಗಳ ಪುನಶ್ಚೇತನಕ್ಕೆ ಸಮಿತಿ
ರಾಜ್ಯದ ಎಲ್ಲ ರಸ್ತೆ ಸಾರಿಗೆ ಸಂಸ್ಥೆಗಳ ಪುನಶ್ಚೇತನಕ್ಕೆ ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಎಂ.ಆರ್. ಶ್ರೀನಿವಾಸ ಮೂರ್ತಿ ಅಧ್ಯಕ್ಷತೆಯ ಸಮಿತಿ ಹಾಗೂ ಎಸ್ಕಾಂ ಗಳ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ವರದಿ ನೀಡಲು ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಕೆ. ಜೈರಾಜ್ ಅವರ ಅಧ್ಯಕ್ಷತೆಯ ಸಮಿತಿ ರಚಿಸಲಾಗುವುದು ಎಂದು ಸಿಎಂ ತಿಳಿಸಿದರು.
ರಾಜ್ಯದ ರಸ್ತೆ ಸಾರಿಗೆ ಸಂಸ್ಥೆಗಳು ಲಾಭದಾಯಕವಾಗಿ ಕಾರ್ಯನಿರ್ವಹಿಸಲು ಹಾಗೂ ಜನತೆಗೆ ಉತ್ತಮ ಸೇವೆ ಒದಗಿಸಲು ಕೈಗೊಳ್ಳಬೇಕಾಗಿರುವ ಸುಧಾರಣಾ ಕ್ರಮಗಳ ಕುರಿತು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದ ಎಂ.ಆರ್. ಶ್ರೀನಿವಾಸಮೂರ್ತಿ ಅವರ ನೇತೃತ್ವದ ಸಮಿತಿ ರಚಿಸಲಾಗುತ್ತಿದೆ.
ಕೆ. ಜೈರಾಜ್ ಅವರು ಇಂಧನ ಇಲಾಖೆಯಲ್ಲಿ ಸೇವೆ ಸಲ್ಲಿಸಿ, ಅನುಭವ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ವಿದ್ಯುತ್ ಸರಬರಾಜು ಕಂಪೆನಿಗಳು ಜನರಿಗೆ ಅತ್ಯುತ್ತಮ ಸೇವೆ ನೀಡುವ ಕುರಿತು ಹಾಗೂ ಹಣಕಾಸು ಸ್ಥಿತಿ ಸುಧಾರಣೆ ಕುರಿತು ಪರಿಶೀಲಿಸಿ ವರದಿ ನೀಡಲು ಅವರ ನೇತೃತ್ವದ ಸಮಿತಿ ರಚಿಸಲಾಗುತ್ತಿದೆ. ಶೀಘ್ರವೇ ಆದೇಶ ಹೊರಬೀಳಲಿದೆ ಎಂದು ತಿಳಿಸಿದರು.
ಮತಾಂತರ ನಿಷೇಧ
ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸುವಂತೆ ಕೆಲವು ಮಠಾಧೀಶರು ಮನವಿ ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರ ಈಗಾಗಲೇ ಇತರ ರಾಜ್ಯಗಳ ಕಾಯ್ದೆಗಳನ್ನು ಅಧ್ಯಯನ ನಡೆಸುತ್ತಿದ್ದು, ಶೀಘ್ರವೇ ರಾಜ್ಯವು ತನ್ನದೇ ಪ್ರತ್ಯೇಕ ಕಾಯ್ದೆಯನ್ನು ಹೊಂದಲಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು.
ಬಲವಂತದ, ಆಸೆ, ಆಮಿಷಗಳ ಮೂಲಕ ಮತಾಂತರ ಮಾಡುವುದು ಸಲ್ಲದು ಎಂದು ಸಂವಿಧಾನ ಹೇಳಿದೆ. ಈ ಕುರಿತು ಹಿಂದೆಯೂ ತಾವು ಬಹಿರಂಗ ಹೇಳಿಕೆ ನೀಡಿರುವುದಾಗಿ ಸಿಎಂ ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಅತಿವೃಷ್ಟಿಯಿಂದ ಕಳೆದ ಕೆಲವು ದಿನಗಳಲ್ಲಿ ಸಂಭವಿಸಿರುವ ಹಾನಿಯ ಕುರಿತು ವಿರೋಧ ಪಕ್ಷದ ನಾಯಕರು ಬರೆದಿರುವ ಪತ್ರ ಕೈಸೇರಿದೆ. ಅಧಿಕಾರಿಗಳಿಂದ ವಿವರಗಳನ್ನ ಪಡೆದು ವಿರೋಧ ಪಕ್ಷದ ನಾಯಕರಿಗೆ ಉತ್ತರಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
