ದುಃಖದಿಂದ ಅಲ್ಲ, ಖುಷಿಯಿಂದ ರಾಜೀನಾಮೆ : ಭಾವುಕರಾದ ಬಿಎಸ್ವೈ
ಬೆಂಗಳೂರು : ಮುಖ್ಯಮಂತ್ರಿ ಸ್ಥಾನಕ್ಕೆ ಬಿ ಎಸ್ ಯಡಿಯೂರಪ್ಪ ರಾಜೀನಾಮೆ ಘೋಷಿಸಿದ್ದಾರೆ. ಇಂದು ವಿಧಾನಸೌಧದಲ್ಲಿ ನಡೆದ ಎರಡು ವರ್ಷದ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಅವರು, ಇಂದು ಮಧ್ಯಾಹ್ನ ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸುತ್ತೇನೆ ಎಂದು ಯಡಿಯೂರಪ್ಪ ತಿಳಿಸಿದು.
ಶಿಕಾರಿಪುರಿಂದ ಬಿಜೆಪಿಯೊಂದಿಗೆ ನಾನು ಬಂದಿದ್ದೇನೆ. ಶಿಕಾರಿಪುರದಲ್ಲಿ ಸಂಘದ ಪ್ರಚಾರಕನಾಗಿ ಕಾರ್ಯ ನಿರ್ವಹಿಸಿ, ಚುನಾವಣೆಯಲ್ಲಿ ಗೆದ್ದು, ಘಟಕದ ಅಧ್ಯಕ್ಷನಾಗಿ, ವಿಧಾನಸಭಾ ವಿಪಕ್ಷ ನಾಯಕನಾಗಿ, ಮುಖ್ಯಮಂತ್ರಿಯಾಗಿ ಪಕ್ಷದ ಬೇರೆ ಬೇರೆ ಹುದ್ದೆಗಳಲ್ಲಿ ಕೆಲಸ ಮಾಡಿ ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ ಎಂಬ ತೃಪ್ತಿ ನನಗಿದೆ ಎಂದು ಬಿ ಎಸ್ ವೈ ಭಾವುಕರಾಗಿ ನುಡಿದಿದ್ದಾರೆ.
ಶಿಕಾರಿಪುರದ ಜನ ನನ್ನನ್ನು ಏಳು ಬಾರಿ ಆಯ್ಕೆ ಮಾಡಿದ್ದಾರೆ. ರಾಷ್ಟ್ರೀಯ ನಾಯಕರು ನನ್ನನ್ನು ಬೆಂಬಲಿಸಿದ್ದಾರೆ. ಬಿಜೆಪಿ ನೀಡಿದ ಸ್ಥಾನಕ್ಕೆ, ಅವಕಾಶಕ್ಕೆ ನಾನು ಎಂದಿಗೂ ಋಣಿಯಾಗಿರುತ್ತೇನೆ ಎಂದು ಅವರು ಹೇಳಿದ್ದಾರೆ.
ಮೋದಿ ಮತ್ತೆ ಲೋಕ ಸಭೆ ಚುನಾವಣೆಯಲ್ಲಿ ಗೆದ್ದು ಬರಲಿ, ದೇಶವನ್ನು ವಿಶ್ವ ಮಟ್ಟದಲ್ಲಿ ತೆಗೆದುಕೊಂಡು ಹೋಗುವ ಶಕ್ತಿ ಅವರಿಗೆ ಒಲಿಯಲಿ ಎಂದು ಅವರು ಶುಭ ಹಾರೈಸಿದ್ದಾರೆ.
75 ವರ್ಷ ಮೀರಿದವರು ಕೇಂದ್ರ ಸಚಿವರಾಗಬಾರದು ಮತ್ತು ಸಿಎಂ ಆಗಬಾರದು ಎಂದು ಬಿಜೆಪಿ ವರಿಷ್ಠರು ತೀರ್ಮಾನಿಸಿದ್ದರು. ಆದರೆ ನನಗೆ ಮಾತ್ರ ಅದಕ್ಕೆ ವಿನಾಯಿತಿ ನೀಡಿ ಎರಡು ವರ್ಷ ಆಡಳಿತ ನಡೆಸಲು ಅವಕಾಶ ಮಾಡಿಕೊಟ್ಟರು ಎಂದೂ ಅವರು ಭಾವುಕರಾಗಿ ಹೇಳಿದರು.
