ಶಶಿಧರ್ ಭಟ್ ಅವರಿಗೆ ಹರ್ಮನ್ ಮೊಗ್ಲಿಂಗ್ ಪ್ರಶಸ್ತಿ ಪ್ರದಾನ

ಕಾರವಾರ : ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಉತ್ತರ ಕನ್ನಡ ಜಿಲ್ಲಾ ಘಟಕದ ವತಿಯಿಂದ ಪತ್ರಿಕಾ ದಿನಾಚರಣೆ ಮತ್ತು ಹರ್ಮನ್ ಮೊಗ್ಲಿಂಗ್ ಪ್ರಶಸ್ತಿ ಪ್ರದಾನ ಸಮಾರಂಭ ರವಿವಾರ ಭಟ್ಕಳದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಸಕ ಸುನೀಲ್ ನಾಯ್ಕ ಅವರು ಮಾತನಾಡಿ, ಕೋವಿಡ್ ಸಂದರ್ಭದಲ್ಲಿಯೂ ಪತ್ರಕರ್ತರು ತಮ್ಮ ಜೀವದ ಹಂಗನ್ನು ತೊರೆದು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರಲ್ಲದೇ,ಈ ವರ್ಷದ ಹರ್ಮನ್ ಮೊಗ್ಲಿಂಗ್ ರಾಜ್ಯಮಟ್ಟದ ಪ್ರಶಸ್ತಿಯನ್ನು ಹೆಸರಾಂತ ಪತ್ರಕರ್ತ ಶಶಿಧರ ಭಟ್ಟ ಅವರಿಗೆ ನೀಡಿ ಈ ಪ್ರಶಸ್ತಿಯ ಗೌರವವನ್ನು ಹೆಚ್ಚಿಸಿದ್ದಾರೆ, ಅದಕ್ಕಾಗಿ ಸಂಘಟಕರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಲೈವ್ ಕನ್ನಡ ಪ್ರಧಾನ ಸಂಪಾದಕ ಶಶಿಧರ್ ಭಟ್ ಅವರಿಗೆ ಶಾಸಕ ಸುನೀಲ್ ನಾಯ್ಕ ಅವರು ಹರ್ಮನ್ ಮೊಗ್ಲಿಂಗ್ ಪ್ರಶಸ್ತಿ ಪ್ರಧಾನ ಮಾಡಿ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.
ರಾಜ್ಯ ಮಟ್ಟದ ಹರ್ಮನ್ ಮೊಗ್ಲಿಂಗ್ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಶಶಿಧರ್ ಭಟ್ ಅವರು, ನನಗೆ ಅನೇಕ ಪ್ರಶಸ್ತಿಗಳು ಸಂದಿವೆ. ಆದರೆ ನನ್ನ ಜಿಲ್ಲೆಯ ಪ್ರಶಸ್ತಿ ನನಗೆ ಹೆಚ್ಚು ಸಂತಸ ತಂದಿದೆ. ದೇವರಾಜ್ ಅರಸು ಅವರ ಕಾಲದಲ್ಲಿ ನಾನು ಮಾಧ್ಯಮ ಕ್ಷೇತ್ರಕ್ಕೆ ಬಂದವನು. ಇವತ್ತಿನ ಮಾಧ್ಯಮಗಳಿಗೆ ಜನಿವಾರ ಹಾಕಲಾಗಿದೆ. ಮಾಧ್ಯಮದವರು ಕೋಮುವಾದಿಯಾದರೆ ಸದೃಢ ಸಮಾಜ ಕಟ್ಟಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದರು.
ನಾವು ಪತ್ರಿಕಾ ನಿಷ್ಠರಾಗಿದ್ದರೆ ಇನ್ನೊಬ್ಬರನ್ನು ಪ್ರಶ್ನಿಸುವ ಹಕ್ಕು ನಮಗಿರುತ್ತದೆ. ಇಂದಿನ ಮಾಧ್ಯಮ ಕೋಮುವಾದಿ, ಜನ ವಿರೋಧಿಯಂತ ಬೆಂಕಿ ಹಚ್ಚುವ ಕೆಲಸವನ್ನು ಮಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿರು. ಇಂದಿನ ಪತ್ರಕರ್ತರು ಬಹುತ್ವದ ಪರ ನಿಲ್ಲಬೇಕೆಂದು ಶಶಿಧರ್ ಭಟ್ಟ ಅವರು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಜಿಲ್ಲಾಧ್ಯಕ್ಷ ಮನಮೋಹನ್ ನಾಯ್ಕ ವಹಿಸಿ ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಉಪವಿಭಾಗಾಧಿಕಾರಿ ಮಮತಾದೇವಿ.ಎಸ್, ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ರಾಜ್ಯ ಪ್ರತಿನಿಧಿ ಶಿವಾನಿ ಶಾಂತಾರಾಮ್, ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ನ ಟ್ರಸ್ಟಿಗಳಾದ ರಾಜೇಶ್ ನಾಯಕ ಅವರು ಉಪಸ್ಥಿತರಿದ್ದು ಮಾತನಾಡಿದರು. ಹಿರಿಯ ಪತ್ರಕರ್ತರಾದ ದೀಪಕ್ ಶೇಣ್ವಿ, ತೇಜಸ್ವಿ ಬಿ.ನಾಯ್ಕ, ವಸಂತ ದೇವಾಡಿಗ, ಸುಬ್ರಹ್ಮಣ್ಯ ಭಟ್, ಶಂಕರ ನಾಯ್ಕ, ಅರ್ಜುನ ಮಲ್ಯ ಹಾಜರಿದ್ದರು.
