ಜಿಲ್ಲಾ ಸುದ್ದಿ

ಊಹಾಪೋಹಗಳು ಹೊಸದಲ್ಲ; ಯಡಿಯೂರಪ್ಪನವರೇ ಸಿಎಂ ಆಗಿರುತ್ತಾರೆ: ಆರ್ ಶಂಕರ್

ಯಾದಗಿರಿ: ರಾಜ್ಯದಲ್ಲಿ ಏನೂ ನಡೆಯುತ್ತಿಲ್ಲ, ಏನೂ ನಡೆಯುವುದಿಲ್ಲ. ಮುಂದಿನ ಎರಡು ವರ್ಷಗಳ‌ ಕಾಲ ಯಡಿಯೂರಪ್ಪನವರೇ ಸಿಎಂ ಆಗಿರುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಶಂಕರ್ ಯಾದಗಿರಿಯಲ್ಲಿ ಹೇಳಿದ್ದಾರೆ.

ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ಕುರಿತು ಎದ್ದಿರುವ ಊಹಾಪೋಹಗಳ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಯಾದಗಿರಿಯ ಸರ್ಕ್ಯೂಟ್ ಹೌಸ್ ನಲ್ಲಿ ಅವರು ಮಾತನಾಡಿದರು.

ರಾಜಕೀಯದಲ್ಲಿ ಊಹಾಪೋಹಗಳು ಹೊಸದಲ್ಲ. ಮೊದಲಿನಿಂದ ಊಹಾಪೋಹಗಳಿಗೆ ರೆಕ್ಕೆ ಪುಕ್ಕಗಳನ್ನ ಕಟ್ಟುವುದು ಜಾಸ್ತಿಯಾಗಿವೆ‌. ಸಿಎಂ ಅವರಿಗೆ 78 ವರ್ಷವಾಗಿದ್ದರೂ 28ರ ಯುವಕರಂತೆ ಕೆಲಸ ಮಾಡುತ್ತಿದ್ದಾರೆ. ಪ್ರವಾಹ ಬಂದಾಗ ಅದನ್ನ ಸಮರ್ಥವಾಗಿ ಎದುರಿಸಿದ್ದಾರೆ. ಕಳೆದ ಸಲದ ಕೋರೊನವನ್ನ ಸರಿಯಾಗಿ ನಿಯಂತ್ರಿಸಿದ್ದಾರೆ. ಈ ಭಾರಿ ಕೂಡ ಕೊರೊನ ಕೈಮೀರಿದ್ದರೂ ಅದನ್ನ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಅವರು ಹೆಳಿದ್ದಾರೆ.

ಮುಂದಿನ ಬಾರಿ ಯಡಿಯೂರಪ್ಪನವರ ನೇತೃತ್ವದಲ್ಲಿಯೇ ಚುನಾವಣೆಗೆ ನಾವೆಲ್ಲ ಹೋಗುತ್ತೇವೆ. ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಯಾರೋ ಒಬ್ಬರು ದೆಹಲಿಗೆ ಹೋಗಿಬಂದರೆ ಏನೋ ಆಗುತ್ತಿದೆ ಎಂದಲ್ಲ ಎಂದು ಶಂಕರ್ ಹೇಳಿದ್ದಾರೆ.

ನಿನ್ನೆ ಸಿ.ಪಿ ಯೋಗೀಶ್ವರ್ ಕುರಿತಾಗಿ ಶಾಸಕ ರಾಜುಗೌಡ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಚಿವರು, ಸಿಎಂ ಯಡಿಯೂರಪ್ಪ ಅವರ ಬಗೆಗಿನ ಕಳಕಳಿಯಿಂದ ಅವರು ಹೇಳಿದ್ದಾರೆ. ಹಾಗಾಗಿ ನಾನು ಅದನ್ನು ಸ್ವಾಗತಿಸುತ್ತೇನೆ ಎಂದಿದ್ದಾರೆ.

ಸಿ.ಪಿ ಯೋಗಿಶ್ವರ್ ಬೆಂಬಲಿಗರು ಪ್ರೆಸ್ ಮೀಟ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಯಾರಾದರೂ ಏನಾದರೂ ಕೇಳಿದಾಗ ಅದಕ್ಕೆ ಉತ್ತರ ಕೊಡುವುದು ಧರ್ಮ. ಹಾಗಾಗಿ ಅವರು ಮಾಧ್ಯಮ ಹೇಳಿಕೆ‌ ನೀಡಿರಬಹುದು ಎಂದಿದ್ದಾರೆ.

ಪ್ರಚಾರಪ್ರಿಯರು ಒಬ್ಬಿಬ್ಬರು ಇರುತ್ತಾರೆ. ಆದರೆ ನಾನು ಪ್ರಚಾರಕ್ಕೆ ಕೆಲಸ ಮಾಡುವುದಿಲ್ಲ. ನನಗೆ ಕೊಟ್ಟಂತ ಜವಾಬ್ದಾರಿ ಅಚ್ವುಕಟ್ಟಾಗಿ ನಿಭಾಯಿಸುವೆ ಎಂದು ಶಂಕರ್ ಹೇಳಿದರು.

Spread the love

Related Articles

Leave a Reply

Your email address will not be published. Required fields are marked *

Back to top button