ಹುಬ್ಬಳ್ಳಿಯ ಉಣಕಲ್ ಕೆರೆ ಸಂಪೂರ್ಣ ಭರ್ತಿ; ಸ್ಥಳೀಯ ನಿವಾಸಿಗಳಲ್ಲಿ ಆತಂಕ

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಬಿಡದೇ ಸುರಿಯುತ್ತಿರುವ ಮಳೆಯಿಂದ ಅವಳಿನಗರದ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಉಣಕಲ್ ಕೆರೆ ತುಂಬಿ ಹರಿಯುತ್ತಿದ್ದು, ಕೆರೆಯ ದೃಶ್ಯ ಮನಮೋಹಕವಾಗಿದೆ. ಇನ್ನೂ ಕೆರೆಯು ಸಂಪೂರ್ಣ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಹೊರಗಡೆ ಬೀಡಲಾಗುತ್ತಿದ್ದು, ಇದರಿಂದಾಗಿ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ.
ಸತತ ಸುರಿದ ಮಳೆಯಿಂದಾಗಿ ಐತಿಹಾಸಿಕ ಉಣಕಲ್ ಕೆರೆ ಸಂಪೂರ್ಣ ಭರ್ತಿಯಾಗಿ ಕೊಡಿ ಬಿದ್ದಿದೆ. ಸುಮಾರು 213 ಎಕರೆ ವಿಸ್ತಾರದ ಉಣಕಲ್ ಕೆರೆಯ ರಾಜನಾಲಾಗಳಿಂದ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದೆ. ನಗರದ ಎತ್ತರದ ಪ್ರದೇಶಗಳಾದ ಗಾಮನಗಟ್ಟಿ, ನವನಗರ, ಅಮರಗೋಳದ ಮಾರ್ಗವಾಗಿ ಬರುವ ರಾಜನಾಲಾದ ನೀರು ಕೆರೆಗೆ ಸೇರುತ್ತಿದೆ. ನಿರಂತರ ಮಳೆಯಿಂದಾಗಿ ಕೆರೆಯ ಹೆಚ್ಚುವರಿ ನೀರು ದೊಡ್ಡ ಪ್ರಮಾಣದಲ್ಲಿ ಹರಿದು ಹೋಗುತ್ತಿದೆ. ಸುಮಾರು ವರ್ಷದ ನಂತರ ಉಣಕಲ್ ಕೆರೆ ಕೊಡಿ ಬಿದ್ದಿದ್ದು, ದೃಶ್ಯ ರಮಣೀಯವಾಗಿದೆ.
ಉಣಕಲ್ ಕೆರೆಯ ಕೆಳಭಾಗದ ಪ್ರದೇಶದಳಿಗೆ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಉಣಕಲ್ ಕರೆಯ ಕೆಳಭಾಗದ ದೇವಿನಗರ, ಹನುಮಂತ ನಗರದ, ಲಿಂಗರಾಜ್ ನಗರದ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಕೆಲಭಾಗದ ಬಡಾವಣೆಗಳ ಮನೆಗಳಿಗೆ ನೀರು ನುಗ್ಗುವ ಆತಂಕವಿದೆ. ಕೆರೆಯ ನೀರು ಹರಿದು ಹೋಗಲು ಕಸ ಅಡ್ಡಿಯಾದ ಹಿನ್ನೆಲೆಯಲ್ಲಿ ಜೆಸಿಬಿ ಯಂತ್ರದ ಮೂಲಕ ಪಾಲಿಕೆ ಸಿಬ್ಬಂದಿ ಕಸ ಸ್ವಚ್ಚಗೊಳಿಸಿದರು.




