
ಜಿ.ಮುಮ್ತಾಜ್ ಅಲೀಮ್
ಮೇಲ್ಜಾತಿಯ ಬ್ರಾಹ್ಮಣರು ಮತ್ತು ಬನಿಯಾಗಳ ಪಾರ್ಟಿ ಎಂದು ಕರೆಸಿಕೊಳ್ಳುತ್ತಿದ್ದ ಬಿಜೆಪಿ ಇತ್ತೀಚಿನ ದಿನಗಳಲ್ಲಿ ಹಿಂದುಳಿದ ಜಾತಿಗಳ ಪಕ್ಷ ಎಂದು ಕರೆಸಿಕೊಳ್ಳಲು ಹಾತೊರೆಯುತ್ತಿರುವಂತಿದೆ.
ಉತ್ತರ ಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಮತ್ತೆ ಹಿಂದುಳಿದವರ ಮತಗಳ ಮೇಲೆ ಗಮನ ಕೇಂದ್ರೀಕರಿಸಿದೆ. ಹಿಂದುಳಿದ ಜಾತಿಗಳ ಪೈಕಿ ಯಾದವೇತರ ಮತಗಳನ್ನು ಕ್ರೋಢೀಕರಿಸಿ ಇಡಿಯಾಗಿ ತನ್ನ ಬುಟ್ಟಿಗೆ ಹಾಕಿಕೊಳ್ಳುವ ತನ್ನ ಹಳೆಯ ತಂತ್ರವನ್ನು ಈಗಲೂ ಮುಂದುವರಿಸಿದೆ.
2014ರ ಚುನಾವಣೆಯಲ್ಲಿ ಕುರ್ಮಿ, ಖುಷ್ವಾ, ಲೋಧ್,ಜಾಟ್ ಮತ್ತಿತರ ಸಣ್ಣಪುಟ್ಟ ಹಿಂದುಳಿದ ಜಾತಿಗಳನ್ನು ಒಟ್ಟುಗೂಡಿಸಿ ರಾಜಕೀಯ ಲಾಭ ಪಡೆಯುವಲ್ಲಿ ಯಶಸ್ವಿಯಾಗಿತ್ತು.ಈಗ 2022ರ ವಿಧಾನಸಭೆ ಚುನಾವಣೆಗೂ ಮುನ್ನ ರಾಜ್ಯದ ಒಟ್ಟು ಜನಸಂಖ್ಯೆಯ ಶೇ.40ರಷ್ಟಿರುವ ಹಿಂದುಳಿದ ಜಾತಿಗಳ ಮತಗಳ ಮೇಲೆ ಮತ್ತೆ ಕಣ್ಣಿಟ್ಟಿದೆ.
ಇದೇ ಜುಲೈ 23ರಂದು ನವದೆಹಲಿಯಲ್ಲಿ ಬಿಜೆಪಿ ಓಬಿಸಿ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಸಭೆಯಲ್ಲಿ ಓಬಿಸಿಗಳ ಮತಗಳನ್ನು ಇನ್ನಷ್ಟು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಕಾರ್ಯತಂತ್ರ ರೂಪಿಸುವ ಸಾಧ್ಯತೆ ಇದೆ.
ಹಿಂದುಳಿದವರಲ್ಲಿ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ತಮ್ಮ ಮಂತ್ರಿಮಂಡಲದಲ್ಲಿ 27 ಮಂದಿ ಓಬಿಸಿ ಮುಖಂಡರಿಗೆ ಸ್ಥಾನಾವಕಾಶ ಕಲ್ಪಿಸಿದ್ದಾರೆ. ಓಬಿಸಿ ಮೋರ್ಚಾದ ಕಾರ್ಯಕಾರಿಣಿ ಸಭೆ ಸಂದರ್ಭದಲ್ಲಿ ಉತ್ತರ ಪ್ರದೇಶ ಚುನಾವಣೆಯೂ ಸೇರಿದಂತೆ ಅನೇಕ ವಿಷಯಗಳ ಕುರಿತು ಚರ್ಚೆ ನಡೆಸಲಿದ್ದೇವೆ ಎಂದು ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಕೆ.ಲಕ್ಷ್ಮಣ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಓಬಿಸಿ ಮೋರ್ಚಾ ಮುಖ್ಯ ಪಾತ್ರ ನಿರ್ವಹಿಸಲಿದೆ ಎಂದು ಯುಪಿ ಓಬಿಸಿ ಘಟಕದ ಅಧ್ಯಕ್ಷ ನರೇಂದ್ರ ಕಶ್ಯಪ್ ಹೇಳಿದ್ದಾರೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಓಬಿಸಿಗಳ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮ ಮತ್ತು ಕಾರ್ಯಕ್ರಮಗಳನ್ನು ಸಾಂಘಿಕ ಪ್ರಯತ್ನಗಳಿಗನುಗುಣವಾಗಿ ಜನರ ನಡುವೆ ಹೈಲೈಟ್ ಮಾಡುತ್ತೇವೆ. ಈ ಮೂಲಕ ನಮ್ಮ ನೆಲೆಯನ್ನು ವಿಸ್ತರಿಸಿಕೊಳ್ಳುವುದು ನಮ್ಮ ಕಾರ್ಯತಂತ್ರದ ಭಾಗವಾಗಿರಲಿದೆ ಎಂದೂ ಕಶ್ಯಪ ತಿಳಿಸಿದ್ದಾರೆ.
ರಾಜ್ಯದ ಮೂರನೇ ಒಂದು ಭಾಗದಷ್ಟಿರುವ ಯಾದವೇತರ ಜಾತಿಗಳನ್ನು ಆಕರ್ಷಿಸುವುದರತ್ತ ಗಮನ ಕೇಂದ್ರೀಕರಿಸುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಸಣ್ಣಪುಟ್ಟ ಜಾತಿಗಳನ್ನು ಒಟ್ಟುಗೂಡಿಸಿದರೆ ಅದರ ಗಾತ್ರ ದೊಡ್ಡದು ಎಂಬುದು ಇದರ ಹಿಂದಿನ ಲೆಕ್ಕಾಚಾರ.
ಆದರೆ, ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದ ಮೂರು ವಿವಾದಾತ್ಮಕ ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ಜಾಟ್ ಸಮುದಾಯ ಮುನಿಸಿಕೊಂಡು ಹೋರಾಟದ ಕಣಕ್ಕೆ ಇಳಿದಿದೆ. ಇದು ಬಿಜೆಪಿಗೆ ಸಮಸ್ಯೆಯಾಗಬಹುದು. ಏಕೆಂದರೆ ರಾಜ್ಯದ ಒಟ್ಟು ಜನಸಂಖ್ಯೆಯ ಶೇ.2 ರಷ್ಟಿರುವ ಜಾಟರು ಯುಪಿ ರಾಜಕೀಯದಲ್ಲಿ ಮುಖ್ಯಭೂಮಿಕೆಯನ್ನು ನಿರ್ವಹಿಸುತ್ತಾ ಬಂದಿದ್ದಾರೆ. ಸರಿಸುಮಾರು 55 ವಿಧಾನಸಭೆ ಕ್ಷೇತ್ರಗಳ ಮೇಲೆ ಹಿಡಿತ ಸಾಧಿಸಿದ್ದಾರೆ. ಆದರೆ ಬಿಜೆಪಿ ಮುಖಂಡ ನರೇಂದ್ರ ಕಶ್ಯಪ್ ಪ್ರಕಾರ ಕೆಲವೇ ಮಂದಿ 40 ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ ಜತೆ ಗುರುತಿಸಿಕೊಂಡಿದ್ದಾರೆ. ಜಾಟ್ ಜನಸಮುದಾಯದ ಬಹುಪಾಲು ಮುಖಂಡರು ತಮ್ಮ ಪಕ್ಷದೊಂದಿಗಿದ್ದಾರೆ.
2017ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಯದವೇತರ ಹಿಂದುಳಿದ ಜಾತಿಗೆ ಸೇರಿದ ಮುಖಂಡರಿಗೆ 148 ಕ್ಷೇತ್ರಗಳಲ್ಲಿ ಟಿಕೆಟ್ ನೀಡಿ ಕಣಕ್ಕಿಳಿಸಿತ್ತು.ಇದು ಚುನಾವಣೆಯಲ್ಲಿ ಪಕ್ಷಕ್ಕೆ ಭಾಗಶಃ ಲಾಭ ತಂದುಕೊಟ್ಟಿತ್ತು.



