ಕೊಡವ ಕಿರು ಸಿನಿಮಾ ಪ್ರಶಸ್ತಿ ವಿತರಣೆ

ಮಡಿಕೇರಿ: ಕೊಡಗು ನಾಡು, ನುಡಿ, ಸಂಸ್ಕೃತಿಯನ್ನು ಪ್ರತಿಯೊಂದು ಕ್ಷೇತ್ರದಲ್ಲಿ ಬಿತ್ತುವ ಕೆಲಸ ಕೊಡವರಿಂದ ಆಗಬೇಕು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಅಮ್ಮಾಟಂಡ ಪಾರ್ವತಿ ಹೇಳಿದರು.
ನಗರದ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ನಡೆದ ಕೊಡವ ಚೆರ್ ಸಿನಿಮಾ ಪೈಪೋಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊಡಗಿನ ಜನರಲ್ಲಿ ಕಲೆಗೆ ಹೆಚ್ಚಿನ ಆಸಕ್ತಿ ಇರುವುದು ಸಂತಸದ ಸಂಗತಿ. ದೇಶಕ್ಕೆ ಉತ್ತಮ ಯೋಧರನ್ನು ನೀಡುವ ಕೊಡಗು, ಸಾಹಿತ್ಯ, ಸಂಸ್ಕೃತಿಯಲ್ಲಿಯೂ ಸಹ ತನ್ನದೆ ಆದ ಛಾಪು ಮೂಡಿಸಿದೆ. ಕೊಡಗಿನ ಕಿರು ಚಿತ್ರಗಳು ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪಡೆದಿವೆ. ಅಂತಹ ಕಿರು ಚಿತ್ರಗಳನ್ನು ನಿರ್ಮಿಸುವುದು ಅತ್ಯಗತ್ಯ ಎಂದರು.
ಕೊಡಗು ಕಾಫಿ ನಾಡು ಮಾತ್ರವಲ್ಲದೆ ಕಲೆಗಳ ಬೀಡು ಎಂಬುದನ್ನು ರಾಜ್ಯದ ಜನತೆ ಸ್ಮರಿಸಬೇಕು. ಜೊತೆಗೆ ಕೊಡಗಿನ ಸಂಸ್ಕ್ರತಿ ವೈಭವವನ್ನು ಸಾರುವ ನಿಟ್ಟಿನಲ್ಲಿ ಜನರಿಗೆ ನೇರವಾಗಿ ಚಿತ್ರಗಳ ಮೂಲಕ ತಿಳಿಸುವ ಪ್ರಯತ್ನ ಮಾಡಬೇಕು ಎಂದು ಅಮ್ಮಟಂಡ ಪಾರ್ವತಿ ಅವರು ಅಭಿಪ್ರಾಯ ಪಟ್ಟರು.
ಹಿರಿಯ ಸಿನಿಮಾ ಕಲಾವಿದರಾದ ನೆರವಮಡ ಉಮೇಶ್ ಮಾತನಾಡಿ ‘ಸಾರಿ’ಎಂಬ ಆಂಗ್ಲ ಭಾಷೆಯ 5 ನಿಮಿಷಗಳ ಕಿರು ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಬಂದಿದೆ. ಒಂದು ಚಲನಚಿತ್ರ 2.30 ಗಂಟೆಗಳಲ್ಲಿ ಕಥೆಯ ಸಾರಾಂಶ ತಿಳಿಸಲು ಕಷ್ಟಪಡುವ ಕಾಲದಲ್ಲಿ ಕಿರು ಚಿತ್ರಗಳು ಸಂದೇಶಗಳನ್ನು ಮನಮೋಹಕವಾಗಿ ನಿಗದಿತ ಸಮಯದಲ್ಲಿ ಹೇಳುವುದು ವಿಸ್ಮಯವೇ ಸರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಅಕಾಡೆಮಿಯ ಪ್ರಕಟಿತ ಪುಸ್ತಕಗಳು ಮತ್ತು ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು. ಸದಸ್ಯರಾದ ಸುಭಾಸ್ ನಾಣಯ್ಯ ಇತರರು ಇದ್ದರು.




