Latestರಾಜಕೀಯರಾಷ್ಟ್ರೀಯ

ತನ್ನದೇ ನಾಗರಿಕರ ಮೇಲೆ ಸರ್ಕಾರದ ‘ಪೆಗಾಸಸ್’ ಕಣ್ಗಾವಲು ?

ಎಂ ಹೈದರ್

ನವದೆಹಲಿ : ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯ ಕೇಳಲು ವ್ಯಕ್ತಿಯಾಗಲಿ ಸಂಸ್ಥೆಗಳಾಗಲಿ ಅಂತಿಮವಾಗಿ ಹೋಗಿ ನಿಲ್ಲಬೇಕಿರುವುದು ಸುಪ್ರೀಂ ಕೋರ್ಟ್ ನಲ್ಲಿ ಅಲ್ಲಿ ನ್ಯಾಯ ತೀರ್ಮಾನ ಮಾಡಬೇಕಿರುವುದು ಮುಖ್ಯ ನ್ಯಾಯಮೂರ್ತಿಗಳು ಅಂತಹ ನ್ಯಾಯಮೂರ್ತಿಗಳ ಕಾರ್ಯ ಚಟುವಟಿಕೆಗಳ ಮೇಲೆ ಸರ್ಕಾರವೇ ಕಣ್ಗಾವಲು ಇರಿಸಿ ಅವರನ್ನು ತನ್ನ ಕೈಗೊಂಬೆಯನ್ನಾಗಿಸಿ ಕೊಳ್ಳುತ್ತದೆ ಎಂದರೆ ನ್ಯಾಯಾಂಗ ವ್ಯವಸ್ಥೆಯ ಗತಿಯೇನು?

ವಿರೋಧ ಪಕ್ಷದ ನಾಯಕ, ಚುನಾವಣೆಯಲ್ಲಿ ರೂಪಿಸುವ ರಣತಂತ್ರದ ಮಾಹಿತಿಗಳನ್ನು ಆಳುವ ಸರ್ಕಾರ ಹೆಜ್ಜೆ ಹೆಜ್ಜೆಗೂ ತರಿಸಿಕೊಂಡು ಚುನಾವಣಾ ಆಯುಕ್ತರನ್ನು ತನ್ನ ಆಜ್ಞೆಯಂತೆ ಕೆಲಸ ಮಾಡಲು ಒತ್ತಡ ಹೇರಿ ಚುನಾವಣೆಯನ್ನು ವಾಮ ಮಾರ್ಗದಲ್ಲಿ ಗೆದ್ದರೆ ಪ್ರಜಾಪ್ರಭುತ್ವದ ಗತಿಯೇನು?

ಇಸ್ರೇಲ್ ನ ‘ಪೆಗಾಸಸ್’ ಕಂಪನಿಯು ಭಾರತದ ಪ್ರಮುಖ ವ್ಯಕ್ತಿಗಳ ಬಗ್ಗೆ ಕಣ್ಗಾವಲು ಇರಿಸಿ ಅವರ ಮಾಹಿತಿಯನ್ನು ತನ್ನ ಗ್ರಾಹಕ ಸರ್ಕಾರಕ್ಕೆ ಮಾರಾಟ ಮಾಡಿದ ಮಾಹಿತಿ ಬಹಿರಂಗವಾದ ಬೆನ್ನಿಗೆ ಇಂತಹ ಹಲವು ಪ್ರಶ್ನೆಗಳು ಜನರನ್ನು ಕಾಡುತ್ತಿದೆ.

ಇಸ್ರೇಲ್ ನ ಸಾಫ್ಟವೇರ್ ‘ಪೆಗಾಸಸ್’ ತಂತ್ರಾಂಶವನ್ನು ಬಳಸಿಕೊಂಡು ಭಾರತದ ನಾಗರಿಕರು, ನ್ಯಾಯಮೂರ್ತಿ, ಚುನಾವಣಾ ಆಯುಕ್ತರು, ವಿರೋಧ ಪಕ್ಷಗಳ ನಾಯಕರು, ಪತ್ರಕರ್ತರು, ಸಚಿವರು ಅಧಿಕಾರಿಗಳು, ಮಾನವ ಹಕ್ಕುಗಳ ಹೋರಾಟಗಾರರು, ಉದ್ಯಮಿಗಳು, ವಿಜ್ಞಾನಿಗಳು ಸೇರಿದಂತೆ ಸುಮಾರು 300 ಫೋನ್‌ಗಳನ್ನು 2018-19 ರಲ್ಲಿ ಟ್ಯಾಪ್‌ ಮಾಡಲಾಗಿದೆ ಎಂದು, ಭಾರತದ ‘ದ ವೈರ್’ ಮತ್ತು ಬ್ರಿಟಿಷ್ ಪತ್ರಿಕೆ ‘ದ ಗಾರ್ಡಿಯನ್’ ಸೇರಿದಂತೆ ಸುಮಾರು 16 ಅಂತರರಾಷ್ಟ್ರೀಯ ಮಾದ್ಯಮಗಳು ಈ ಆಘಾತಕಾರಿ ಮಾಹಿತಿಯನ್ನು ವಿವಿಧ ಆಯಾಮಗಳಲ್ಲಿ ಬಹಿರಂಗ ಪಡಿಸಿವೆ,

‘ಪೆಗಾಸಸ್’ ನಿಂದ ಹ್ಯಾಕ್ ಮಾಡಲಾಗಿರುವ ವ್ಯಕ್ತಿಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್, ಮಾಜಿ ಚುನಾವಣಾ ಆಯುಕ್ತ ಅಶೋಕ್ ಲವಾಸ, ಮಮತಾ ಬ್ಯಾನರ್ಜಿ ಅವರ ಸಂಬಂಧಿ ಅಭಿಷೇಕ್ ಬ್ಯಾನರ್ಜಿ, ಈಗಿನ ಐಟಿ ಸಚಿವ ಅಶ್ವಿನಿ ವೈಷ್ಣವ್, ಪ್ರಹ್ಲಾದ ಸಿಂಗ್‌ ಪಟೇಲ್, ಸ್ಮೃತಿ ಇರಾನಿಯ ಆಪ್ತ ಸಹಾಯಕ ಸಂಜಯ್ ಕಾಚ್ರೂ, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆಯವರ ಆಪ್ತ ಸಹಾಯಕ ಸೇರಿದಂತೆ ಹಲವು ವ್ಯಕ್ತಿಗಳ ಸುಮಾರು 300 ಪೋನ್ ಗಳು ಹ್ಯಾಕ್ ಮಾಡಲಾಗಿದೆ ಎಂಬ ಮಾಹಿತಿ ಅಂತರರಾಷ್ಟ್ರೀಯ ಮಟ್ಟದ ವಿವಿಧ ಮಾದ್ಯಮಗಳು ವರದಿ ಮಾಡಿವೆ.

2017 ರಿಂದ 2019 ರ ಲೋಕಸಭಾ ಚುನಾವಣೆವರೆಗೂ ‘ಪೆಗಾಸಸ್’ ನಿಂದ ಹ್ಯಾಕ್ ಒಳಗಾಗಿರುವ ವ್ಯಕ್ತಿಗಳಲ್ಲಿ ರಾಹುಲ್ ಗಾಂಧಿಯವರ ಕನಿಷ್ಠ ಎರಡು ಪೋನ್ ಗಳು, ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ಮೇಲೆ ಲೈಂಗಿಕ ಕಿರುಕುಳ ಆರೋಪ  ಮಾಡಿದ್ದ ಸುಪ್ರೀಂಕೋರ್ಟ್ ಸಿಬ್ಬಂದಿಗೆ ಸಂಬಂಧಿಸಿದ 11 ಮೊಬೈಲ್ ನಂಬರ್‌ಗಳನ್ನು ಹ್ಯಾಕ್ ಮಾಡಲಾಗಿದೆ.

ಆದರೆ ಐಟಿ ಸಚಿವ ಅಶ್ವಿನಿ ವೈಷ್ಣವ್ ಸರ್ಕಾರದ ಪರವಾಗಿ ಇದನ್ನು ಅಲ್ಲಗಳೆದಿದ್ದಾರೆ ಮತ್ತು ಅವರು ರಾಷ್ಟ್ರೀಯ ಭದ್ರತಾ ವಿಷಯಗಳಿಗೆ ದಕ್ಕೆ ಉಂಟಾಗುವ ಮತ್ತು ಭಯೋತ್ಪಾದಕ ಕೃತ್ಯಗಳನ್ನು ನಡೆಸುವ ವ್ಯಕ್ತಿಗಳ ಮೇಲೆ ಇಂತಹ ಕಣ್ಗಾವಲು ಇರಿಸಬೇಕಾಗುತ್ತದೆ ಎಂದಿದ್ದಾರೆ, ಇದರಿಂದಾಗಿ ಉಂಟಾಗುವ ಪ್ರಶ್ನೆ ಎಂದರೆ ಮುಖ್ಯ ನ್ಯಾಯಮೂರ್ತಿಗಳು, ಚುನಾವಣಾ ಆಯುಕ್ತರು, ವಿರೋಧ ಪಕ್ಷದ ನಾಯಕರು ಇವರೆಲ್ಲರಿಂದ ರಾಷ್ಟ್ರೀಯ ಭದ್ರತೆ ದಕ್ಕೆ ಉಂಟಾಗುವ ಬಗೆ ಹೇಗೆ?

‘ಪೆಗಾಸಸ್’ ಕಂಪನಿಯು ಯಾವುದೇ ದೇಶದ ಅಧಿಕೃತ ಸರ್ಕಾರಗಳಿಗೆ ಮಾತ್ರ ಹ್ಯಾಕ್ ಮಾಡಿದ ಮಾಹಿತಿಯನ್ನು ಮಾರಾಟ ಮಾಡುತ್ತದೆ. ಯಾವುದೇ ಖಾಸಗಿ ಸಂಸ್ಥೆಗಳಿಗೆ ಮಾಹಿತಿಗಳನ್ನು ಮಾರಾಟ ಮಾಡುವುದಿಲ್ಲ ಅದು ಈಗ ಸುಮಾರು 36 ಗ್ರಾಹಕರನ್ನು ಹೊಂದಿದೆ ಆದರೆ ಗ್ರಾಹಕರು ಯಾರು ಎಂಬುದನ್ನು ಗುಪ್ತವಾಗಿರಿಸುತ್ತದೆ.

ದೇಶದಲ್ಲಿನ ಆಳುವ ಪ್ರಭುತ್ವವು ವಿರೋಧ ಪಕ್ಷಗಳು ಸೇರಿದಂತೆ ಇಡೀ ವ್ಯವಸ್ಥೆಯನ್ನು ನಿಯಂತ್ರಿಸಲು ಅವರ ಕಾರ್ಯ ಚಟುವಟಿಕೆಗಳ ಮೇಲೆ ಕಣ್ಗಾವಲು ಇರಿಸಿ ಅವರನ್ನು ಹದ್ದಬಸ್ತಿನಲ್ಲಿಡಲು ಈ ವಾಮ ಮಾರ್ಗವನ್ನು ಉಪಯೋಗಿಸುತ್ತಿದೆ ಎಂಬ ಟೀಕೆ ಎಲ್ಲೆಡೆ ವ್ಯಕ್ತವಾಗುತ್ತಿದೆ.

ಇಸ್ರೇಲ್ ನ ‘ಪೆಗಾಸಸ್’ ನ ಬಗೆಗಿನ ಈ ಮಾಹಿತಿಗಳು ಬಹಿರಂಗ ವಾದಂತೆ ಬಿಜೆಪಿಯೂ 2019ರ ಲೋಕಸಭಾ ಚುನಾವಣೆಯನ್ನು ವಾಮಮಾರ್ಗದಲ್ಲಿ ಗೆದ್ದಿದೆಯೇ ಎಂಬ ಬಲವಾದ ಅನುಮಾನಕ್ಕೆ ಕೂಡ ಇದು ಕಾರಣವಾಗಿದೆ.

ಪುಲ್ವಾಮದಲ್ಲಿ ಹುತಾತ್ಮರಾದ ಯೋಧರನ್ನು ಚುನಾವಣಾ ಪ್ರಚಾರದಲ್ಲಿ ಚುನಾವಣಾ ಲಾಭಕ್ಕೆ ಬಳಸುವಂತಿಲ್ಲ ಎಂಬ ಚುನಾವಣಾ ಆಯೋಗದ ಎಚ್ಚರಿಕೆ ಹೊರತಾಗಿಯೂ ಪ್ರಧಾನಿ ನರೇಂದ್ರ ಮೋದಿ ಅವರು ಪುಲ್ವಾಮದಲ್ಲಿ ಹುತಾತ್ಮ ಯೋಧರ ಹೆಸರಿನಲ್ಲಿ ಮತ ಯಾಚಿಸಿದರು, ಅದನ್ನು ತೀವ್ರವಾಗಿ ಆಕ್ಷೇಪಿಸಿದ ಚುನಾವಣಾ ಆಯುಕ್ತರಲ್ಲಿ ಒಬ್ಬರಾಗಿದ್ದ ಅಶೋಕ್ ಲವಾಸ ಅವರ ಮೇಲೆ ಕಣ್ಗಾವಲು ಇರಿಸಿ ಅವರ ಪೋನ್ ಟ್ಯಾಪ್ ಮಾಡಲಾಯಿತು ಕೊನೆಗೆ ಬೇಸತ್ತ ಅವರು ರಾಜೀನಾಮೆ ನೀಡಿ ಬೇರೆ ಕೆಲಸ ನೋಡಿಕೊಂಡರು.

ಅಂದಿನ ಮುಖ್ಯ ನ್ಯಾಯಮೂರ್ತಿಯಾಗಿದ್ದ ರಂಜನ್ ಗೊಗೊಯ್ ಅವರು ತಮ್ಮ ಸಿಬ್ಬಂದಿಯೊಬ್ಬರಿಗೆ ಮೇಲೆ ಲೈಂಗಿಕ ಕಿರುಕುಳ ನೀಡಿದ್ದ ಬಗ್ಗೆ ಆರೋಪಿಸಲಾಗಿತ್ತು ಇದೇ ಸಮಯದಲ್ಲಿ ಗೊಗೊಯ್ ಅವರ ಮೇಲೆ ‘ಪೆಗಾಸಸ್’ ಕಣ್ಗಾವಲು ಇಟ್ಟಿತ್ತು ಎನ್ನಲಾಗಿದ್ದು. ಲೈಂಗಿಕ ದೌರ್ಜನ್ಯದ ಆರೋಪದ ನಂತರ, ನ್ಯಾಯಮೂರ್ತಿ ಗೊಗೊಯ್ ಅವರು 17 ನವೆಂಬರ್, 2019 ರವರೆಗೆ 46 ನೇ ಸಿಜೆಐ ಆಗಿ ತಮ್ಮ ಅವಧಿಯನ್ನು ಪೂರೈಸಿದರು. ಆ ಸಂದರ್ಭದಲ್ಲಿ ಪೀಠದಿಂದ ಗೊಗೊಯ್ ಕೊಟ್ಟ ತೀರ್ಪುಗಳು ಸರ್ಕಾರದ ನಿರೀಕ್ಷೆಗೆ ತಕ್ಕಂತೆ ಇತ್ತು ಎಂಬ ಬಗ್ಗೆ ಜನರಲ್ಲಿ ಹಲವು ಪ್ರಶ್ನೆಗಳು ಉಂಟಾಗಿತ್ತು ಅಚ್ಚರಿ ಎಂಬಂತೆ ಅವರು ನಿವೃತ್ತಿಯಾದ ಆರು ತಿಂಗಳಲ್ಲಿ, ಅವರನ್ನು ಕೇಂದ್ರ ಸರ್ಕಾರ ರಾಜ್ಯಸಭೆಗೆ “ಶ್ರೇಷ್ಠ ಸದಸ್ಯ” ಎಂದು ನಾಮಕರಣ ಮಾಡಿತ್ತು.

ಈ ಎಲ್ಲ ಕಾರಣಗಳಿಂದ ಈಗ ಮತ್ತಷ್ಟು ಪ್ರಶ್ನೆಗಳು ಜನರನ್ನು ಕಾಡುತ್ತಿದೆ, ರಾಷ್ಟ್ರೀಯ ಭದ್ರತಾ ನಿಯಮಗಳನ್ನು ಕಡೆಗಣಿಸಿ ವಿದೇಶಿ ಏಜೆನ್ಸಿಗಳ ಮೂಲಕ ದೇಶದ ನಾಗರಿಕರ ಮೇಲೆ ಆಳುವ ಸರಕಾರ ಕಣ್ಗಾವಲು ಇರಿಸಿ ಅವರ ಖಾಸಗಿ ಹಕ್ಕುಗಳ ಮೇಲೆ ಸವಾರಿ ಮಾಡಿ ಯಾರಾದರೂ ತನ್ನ ಅಧಿಕಾರಕ್ಕೆ ಅಡ್ಡಿ ಉಂಟುಮಾಡುತ್ತಾರೆ ಎಂಬ ಪೂರ್ವಗ್ರಹದಿಂದ ತನ್ನನ್ನು ವಿರೋಧಿಸುವ ಪ್ರಜೆಗಳನ್ನು ಮಟ್ಟಹಾಕುವ ಹುನ್ನಾರ ಕೇಂದ್ರ ಸರ್ಕಾರದ ಹೇಡಿತನದ ಪರಮಾವಧಿ.

Spread the love

Related Articles

Leave a Reply

Your email address will not be published. Required fields are marked *

Back to top button