ಮುಂಬೈನಲ್ಲಿ ಭಾರೀ ಮಳೆಗೆ ಗೋಡೆ ಕುಸಿತ: 17 ಮಂದಿ ಸಾವು

ಮಹಾರಾಷ್ಟ್ರ : ಮಹರಾಷ್ಟ್ರದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಮುಂಬೈನ ಚೆಂಬೂರ್ ನಲ್ಲಿ ಶನಿವಾರ ತಡರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಭೂಕುಸಿತದಿಂದ ಗುಡಿಸಲುಗಳ ಮೇಲೆ ಗೋಡೆ ಕುಸಿದು 17 ಜನರು ಮೃತಪಟ್ಟಿರುವ ಘಟನೆ ನಡೆದಿದೆ.
ಅವಶೇಷಗಳ ಅಡಿಯಲ್ಲಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್ಡಿಆರ್ಎಫ್), ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಗಾಯಗೊಂಡ ವ್ಯಕ್ತಿಗಳನ್ನು ಬಿಡಿಬಿಎ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ
ಅನೇಕ ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ, ಮಳೆಯ ಕಾರಣ ನಗರ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದ್ದು , ಜನಜೀವನ ಅಸ್ತವ್ಯಸ್ತಗೊಂಡಿದೆ.
ಚೆಂಬೂರಿನಲ್ಲಿ 15 ಜನರನ್ನು ಪರಿಹಾರ ತಂಡಗಳು ರಕ್ಷಣೆ ಮಾಡಿವೆ.
ಕಳೆದ ರಾತ್ರಿ ಮಹಾನಗರಿಯಲ್ಲಿ ರಾತ್ರಿ 8 ಗಂಟೆಯಿಂದ ಬೆಳಗಿನ ಜಾವ 2 ಗಂಟೆಯವರೆಗೆ 156 ಮಿಲೀಮೀಟರ್ ಮಳೆಯಾಗಿದೆ ಎಂದೂ ಮಳೆಯಾಗಿದೆ ಎಂದು ಹವಮಾನ ಇಲಾಖೆ ವರದಿ ಹೇಳಿದೆ.
ಪ್ರಾಣಹಾನಿ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಮೃತಪಟ್ಟವರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ, ಗಾಯಗೊಂಡವರಿಗೆ 50,000 ರೂ. ನೀಡಲಾಗುವುದು ಎಂದು ಅವರ ಕಚೇರಿ ಟ್ವಿಟರ್ನಲ್ಲಿ ತಿಳಿಸಿದೆ.
