ಕೊಡಗು
ಮಡಿಕೇರಿ ಅರಮನೆ ಕಾಮಗಾರಿ ವೀಕ್ಷಿಸಿದ ಜಿಲ್ಲಾಧಿಕಾರಿ; ಮಂದಗತಿಯ ಕಾಮಗಾರಿಗೆ ಅತೃಪ್ತಿ

ಮಡಿಕೇರಿ: ನಗರದ ಪ್ರತಿಷ್ಠಿತ ಅರಮನೆ ನವೀಕರಣ ಕಾಮಗಾರಿ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು, ವಿರೂಪಾಕ್ಷಯ್ಯ, ಎಸ್.ಮಹೇಶ್ ಇತರರು ಶುಕ್ರವಾರ ಭೇಟಿ ನೀಡಿ ವೀಕ್ಷಿಸಿದರು.
ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿರುವುದಕ್ಕೆ ತೀವ್ರ ಅತೃಪ್ತಿ ವ್ಯಕ್ತವಾಯಿತು. ಸರ್ಕಾರ 9.75 ಕೋಟಿ ರೂ. ಬಿಡುಗಡೆ ಮಾಡಿದೆ. ಇದರಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಕೋಟೆ ನವೀಕರಣ ಮಾಡಲು ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ ಎಂದು ವಸ್ತು ಸಂಗ್ರಹಾಲಯದ ಅಧಿಕಾರಿ ಅವರು ಮಾಹಿತಿ ನೀಡಿದರು.
ಮಾಹಿತಿ ಹಕ್ಕು ಆಯೋಗದ ನಿವೃತ್ತ ಆಯುಕ್ತರಾದ ವಿರೂಪಾಕ್ಷಯ್ಯ ಅವರು ಮಾತನಾಡಿ ಮಳೆಗಾಲದಲ್ಲಿ ಕೋಟೆಯೊಳಗೆ ಮಳೆಯಿಂದ ಸೋರುವುದನ್ನು ತಡೆಯಬಹುದಾಗಿತ್ತು, ಆದರೆ ಈ ಕೆಲಸವಾಗಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದರು.
ಸರ್ಕಾರ ಹಣ ನೀಡಿದರೂ ಸಹ ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ ಎಂದು ಅವರು ತೀವ್ರ ಅತೃಪ್ತಿ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಕೋಟೆ ನವೀಕರಣ ಕಾಮಗಾರಿಯನ್ನು ತ್ವರಿತವಾಗಿ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ಅವರು ತಿಳಿಸಿದರು.
ಮಡಿಕೇರಿ ಕೋಟೆ ಅಭಿವೃದ್ದಿಗೆ ಸಂಬಂಧಿಸಿದಂತೆ ರಾಜ್ಯ ಉಚ್ಛ ನ್ಯಾಯಾಲಯದ ಅದೇಶದಂತೆ ಕೋಟೆ ಅಭಿವೃದ್ದಿ ಕಾಮಗಾರಿ, ಮಳೆಗಾಲದಲ್ಲಿ ಕೈಗೊಂಡಿರುವ ಮುಂಜಾಗ್ರತಾ ಕ್ರಮದ ಬಗ್ಗೆ ತಕ್ಷಣವೇ ಅರ್ಜಿದಾರರ ಸಮ್ಮುಖದಲ್ಲಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ನ್ಯಾಯಾಲಯದ ಸೂಚನೆಯ ಹಿನ್ನಲೆಯಲ್ಲಿ ಅರ್ಜಿದಾರರಾದ ವಿರೂಪಾಕ್ಷಯ್ಯ ಅವರು ಶುಕ್ರವಾರ ಜಿಲ್ಲಾಧಿಕಾರಿಗಳೊಂದಿಗೆ ಕೋಟೆಯ ಪರಿಶೀಲನೆ ನಡೆಸಿದರು.




