ರಾಮನಗರ

ಚನ್ನಪಟ್ಟಣದ ಕಣ್ವ ಜಲಾಶಯದಲ್ಲಿ ಥೀಮ್ ಪಾರ್ಕ್ ನಿರ್ಮಾಣ: ಯೋಗೇಶ್ವರ್

ಚನ್ನಪಟ್ಟಣದ ಕಣ್ವ ಜಲಾಶಯ ಪ್ರದೇಶದಲ್ಲಿ ಮಕ್ಕಳಿಂದ ವೃದ್ಧರವರೆಗೆ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಥೀಮ್‌ಪಾರ್ಕ್ ನಿರ್ಮಿಸಲು ನೀಲನಕ್ಷೆ ಸಿದ್ದಪಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕಣ್ವ ತಾಲೂಕಿನ ಪ್ರಮುಖ ಪ್ರವಾಸಿ ತಾಣವಾಗಿ ಗುರುತಿಸಿಕೊಳ್ಳಲಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದರು.

ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮತ್ತು ಕಣ್ವ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಸಭೆ ನಡೆಸಿ, ಕಣ್ವದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಥೀಮ್‌ ಪಾರ್ಕ್​ನಿಂದ ಎರಡರಿಂದ ಮೂರು ಸಾವಿರ ಮಂದಿಗೆ ಉದ್ಯೋಗ ಸಿಗಲಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ವಿಫುಲ ಅವಕಾಶಗಳಿದ್ದು, ಅದನ್ನು ಸದ್ಬಳಕೆ ಮಾಡಿಕೊಂಡು ಜಿಲ್ಲೆಯನ್ನು ಪ್ರಮುಖ ಪ್ರವಾಸಿ ತಾಣವಾಗಿಸಲು ಪ್ರವಾಸೋದ್ಯಮ ಇಲಾಖೆಯಿಂದ ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಕಣ್ವ ಜಲಾಶಯದ ತಪ್ಪಲಿನಲ್ಲಿ ೨೦೦ ಎಕರೆಗೂ ಹೆಚ್ಚು ಸರ್ಕಾರಿ ಗೋಮಾಳದ ಜಮೀನು ಇದೆ. ಈ ಜಾಗವನ್ನು ಸದ್ಬಳಕೆ ಮಾಡಿಕೊಂಡು ಸುಮಾರು ನೂರು ಎಕರೆ ವಿಸ್ತೀರ್ಣದಲ್ಲಿ ಮಕ್ಕಳ ವಿನೋದ ಕ್ರೀಡೆಗಳಿಗೆ ಅನುಕೂಲವಾಗುವಂತೆ ಚಿಲ್ಡ್ರನ್ ಪಾರ್ಕ್, ಜಲ ಸಾಹಸ ಕ್ರೀಡೆಗಳಿಗೆ ಅವಕಾಶ ಸೇರಿದಂತೆ ಪ್ರವಾಸಿಗರನ್ನು ಸೆಳೆಯಲು ಅಗತ್ಯವಿರುವ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಪ್ರವಾಸೋದ್ಯಮ ಕ್ಷೇತ್ರವನ್ನು ಕೇವಲ ಸರ್ಕಾರದಿಂದಲೇ ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ಕಣ್ವ ಚಿಲ್ಡ್ರನ್ ಪಾರ್ಕ್ ಹಾಗೂ ಈ ಪ್ರದೇಶದ ಅಭಿವೃದ್ಧಿ ಕೆಲಸಗಳಿಗೆ ಖಾಸಗಿ ಸಹಭಾಗಿತ್ವವನ್ನು ಪಡೆಯಲಾಗುವುದು. ನಮ್ಮ ಇಲಾಖೆಯ ಅಂಗಸಂಸ್ಥೆಗಳಾದ ಜಂಗಲ್‌ಲಾಡ್ಜಸ್ ಮತ್ತು ಕೆಎಸ್‌ಟಿಡಿಸಿಯನ್ನು ಬಳಕೆ ಮಾಡಿಕೊಂಡು ಇತರ ಖಾಸಗಿ ಹೂಡಿಕೆದಾರರನ್ನು ಆಹ್ವಾನಿಸಿ ಈ ಪ್ರದೇಶಗಳ ಅಭಿವೃದ್ಧಿ ಕೆಲಸವನ್ನು ಕೈಗೊಳ್ಳಲಾಗುವುದು ಎಂದರು.

ಕಣ್ವ ಜಲಾಶಯದಲ್ಲಿ ವರ್ಷದ ಎಲ್ಲಾ ಕಾಲದಲ್ಲೂ ೩೦ ಅಡಿಯಷ್ಟು ನೀರು ನಿಂತಿರುತ್ತದೆ. ಇದನ್ನು ಗಮನದಲ್ಲಿರಿಸಿಕೊಂಡು ಜಲಾಶಯದಲ್ಲಿ ಕ್ರೂಸರ್ ಮಾದರಿಯಲ್ಲಿ ಪ್ರವಾಸಿಗರು ಉಳಿದು ಕೊಳ್ಳಲು ಅನುಕೂಲವಾಗುವಂತೆ ರೆಸಾರ್ಟ್ ನಿರ್ಮಾಣ ಮಾಡಲಾಗುವುದು. ಇದಕ್ಕಾಗಿ ಮಂಗಳೂರು ಹಾಗೂ ಕರಾವಳಿಯ ಪರಿಣಿತರನ್ನು ಕರೆಸಿ ಪರಿಶೀಲನೆ ನಡೆಸಲಾಗುವುದು. ಕಣ್ವ ಜಲಾಶಯದಿಂದ ಕೃಷ್ಣಗಿರಿ ಬೆಟ್ಟದ ವರೆಗೆ ಟ್ರಕ್ಕಿಂಗ್ ಮಾಡುವ ಪ್ರವಾಸಿಗರಿಗೆ ಅನುಕೂಲವಾಗುವಂತೆ ಟ್ರಕ್ಕಿಂಗ್ ಪಾತ್ ನಿರ್ಮಿಸಲಾಗುವುದು. ಕೆಲ ಪ್ರವಾಸಿಗರು ಬೆಟ್ಟ ಗುಡ್ಡಗಳ ಪ್ರದೇಶದಲ್ಲಿ ಟ್ರಕ್ಕಿಂಗ್ ಮಾಡಲು ಇಷ್ಟ ಪಡುತ್ತಾರೆ. ಬೆಂಗಳೂರಿನ ಸಮೀಪ ಇರುವ ಮಾಕಳಿದುರ್ಗ ಬೆಟ್ಟದ ಪ್ರದೇಶದಲ್ಲಿ ಪ್ರವಾಸೋದ್ಯಮ ಇಲಾಖೆ ಟ್ರಕ್ಕಿಂಗ್‌ಗೆ ಸಾಕಷ್ಟು ಅವಕಾಶ ಕಲ್ಪಿಸಿಕೊಟ್ಟಿದ್ದು, ಇಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಅದೇ ರೀತಿ ಕಣ್ವ ಜಲಾಶಯದಿಂದ ಮಾಕಳಿಗ್ರಾಮದ ಕೃಷ್ಣಗಿರಿ ಬೆಟ್ಟದ ವರೆಗೆ ಟ್ರಕ್ಕಿಂಗ್ ಪಾಥ್ ನಿರ್ಮಿಸಿ, ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button