ಬೆಳಗಾವಿ

ಬಾಗಲಕೋಟೆಯ ನಾಲ್ವರು ಅಗ್ನಿಶಾಮಕ ಸಿಬ್ಬಂದಿಗೆ ಮುಖ್ಯಮಂತ್ರಿ ಚಿನ್ನದ ಪದಕ; ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಕ್ಕೆ ಪ್ರಶಂಸೆ

ಬಾಗಲಕೋಟೆ: ಕರ್ನಾಟಕ ರಾಜ್ಯ ಅಗ್ನಿಶಾಮಕ ಹಾಗೂ ತುರ್ತು ಸೇವಾ ಇಲಾಖೆಯಿಂದ ಕೊಡಮಾಡಲಾಗುವ ಅತ್ಯುತ್ತಮ ಸೇವಾ ಪ್ರಶಸ್ತಿ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಬಾಗಲಕೋಟೆ ಜಿಲ್ಲೆಯ ನಾಲ್ವರು ಅಧಿಕಾರಿ, ಸಿಬ್ಬಂದಿ ಭಾಜನರಾಗಿದ್ದಾರೆ.

ಬಾಗಲಕೋಟೆ ಜಿಲ್ಲಾ ಅಗ್ನಿಶಾಮಕ ಹಾಗೂ ತುರ್ತು ಸೇವಾ ಇಲಾಖೆಯ ಜಿಲ್ಲಾ ಅಗ್ನಿಶಾಮಕ ಅಧಿಕಾರಿ, ಅಗ್ನಿಶಾಮಕ, ಚಾಲಕ ಹಾಗೂ ಮುಧೋಳ ಅಗ್ನಿಶಾಮಕ ಠಾಣಾಧಿಕಾರಿ ಸೇರಿ ನಾಲ್ವರಿಗೆ ಚಿನ್ನದ ಪದಕ ಜೊತೆಗೆ ಪ್ರಶಸ್ತಿ ದೊರೆತಿದೆ. ಬಾಗಲಕೋಟೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಲ್ಲಿಕಾರ್ಜುನಪ್ಪ ಹಾಗೂ ಅಗ್ನಿಶಾಮಕರಾದ ಮಹಾಂತೇಶ ರಾಠೋಡ್, ಅಗ್ನಿಶಾಮಕ ಚಾಲಕ ತಮ್ಮಣ್ಣ ಗೌಡರ,ಮುಧೋಳ ಅಗ್ನಿಶಾಮಕ ಠಾಣಾಧಿಕಾರಿ ಬಿ ಎಂ ಬಂಡಿವಡ್ಡರ ಅತ್ಯುತ್ತಮ ಸೇವಾ ಪ್ರಶಸ್ತಿ ಪಡೆದುಕೊಂಡು ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.

ಜುಲೈ 13ರಂದು ಬೆಂಗಳೂರಿನ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಂದ ಅತ್ಯುತ್ತಮ ಸೇವಾ ಪ್ರಶಸ್ತಿಯ ಚಿನ್ನಪದಕ ಪಡೆದುಕೊಂಡಿದ್ದಾರೆ. 2018, 2019, 2020ನೇ ಸಾಲಿನ ಪ್ರಶಸ್ತಿಯನ್ನು ವಿತರಿಸಲಾಗಿದೆ. ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಲ್ಲಿಕಾರ್ಜುನಪ್ಪ ಅವರಿಗೆ 2019ನೇ ಸಾಲಿನಲ್ಲಿ ನೆಲಮಂಗಲದಲ್ಲಿ ಅಗ್ನಿ ಅವಘಡದಲ್ಲಿ ಸಿಲುಕಿದ್ದ 7ವರ್ಷದ ಬಾಲಕಿ ರಕ್ಷಣೆ, ಹಾಗೂ ಇಲಾಖೆಯಲ್ಲಿನ ಸೇವೆ ಪರಿಗಣಿಸಿ ಚಿನ್ನದ ಪದಕ ಪ್ರಶಸ್ತಿ ನೀಡಿದ್ದರೆ, ಬಾಗಲಕೋಟೆ ಅಗ್ನಿಶಾಮಕ ಹಾಗೂ ತುರ್ತು ಸೇವಾ ಇಲಾಖೆಯ ಅಗ್ನಿಶಾಮಕರಾದ ಮಹಾಂತೇಶ ರಾಠೋಡ್ ಹಾಗೂ ಚಾಲಕ ತಮ್ಮಣ್ಣ ಗೌಡರ ಅವರು ಧಾರವಾಡದಲ್ಲಿ ನಡೆದಿದ್ದ ಬಹಮಹಡಿ ಕಟ್ಟಡ ಕುಸಿತ ಪ್ರಕರಣದಲ್ಲಿ 17ಜನ ರಕ್ಷಿಸಿದ್ದನ್ನು ಗುರುತಿಸಿ 2018-19ನೇ ಸಾಲಿನ ಅತ್ಯುತ್ತಮ ಸೇವಾ ಪ್ರಶಸ್ತಿ ನೀಡಲಾಗಿದೆ. ಇನ್ನು ಮುಧೋಳ ಅಗ್ನಿಶಾಮಕ ಠಾಣಾಧಿಕಾರಿ ಬಿ ಎಂ ಬಂಡಿವಡ್ಡರ ಅವರಿಗೆ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ಲಭಿಸಿದೆ. ಸಾರ್ವಜನಿಕ ಆಸ್ತಿ ಪಾಸ್ತಿ, ಅಗ್ನಿ ಅವಘಡದಲ್ಲಿ ಪ್ರಾಣ ರಕ್ಷಣೆ, ಪ್ರವಾಹ ಪೀಡಿತ ಪ್ರದೇಶದಲ್ಲಿ ಜನ ಜಾನುವಾರು ರಕ್ಷಣೆ ಮಾಡುವ ಮೂಲಕ ಬಾಗಲಕೋಟೆ ಅಗ್ನಿ ಶಾಮಕ ಹಾಗೂ ತುರ್ತು ಸೇವಾ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಶ್ರಮಿಸಿದ್ದು, ಆ ಮೂಲಕ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಪ್ರಶಸ್ತಿ ದೊರೆತಿದ್ದಕ್ಕೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಲ್ಲಿಕಾರ್ಜುನಪ್ಪ ಹಾಗೂ ಅಗ್ನಿಶಾಮಕರಾದ ಮಹಾಂತೇಶ ರಾಠೋಡ್ ಸಂತಸ ಹಂಚಿಕೊಂಡಿದ್ದಾರೆ.

ಜಿಲ್ಲೆಯ ಅಗ್ನಿಶಾಮಕ ಹಾಗೂ ತುರ್ತು ಸೇವಾ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಮುಖ್ಯಮಂತ್ರಿ ಚಿನ್ನದ ಪದಕ ಪಡೆಯುವ ಮೂಲಕ ಇತರರಿಗೆ ಸ್ಪೂರ್ತಿಯಾಗಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button