Latestರಾಜಕೀಯರಾಷ್ಟ್ರೀಯ

ಗುಟ್ಟು ಬಿಡದ ರಾಜಕೀಯ ಸೂತ್ರಧಾರನ ಚಾಣಾಕ್ಷ ನಡೆ!

ಜಿ.ಮುಮ್ತಾಜ್ ಅಲೀಮ್

ದೇಶದ ಹೆಸರಾಂತ ಚುನಾವಣಾ ರಾಜಕೀಯ ತಂತ್ರಗಾರರೆಂದೇ ಖ್ಯಾತರಾದ ಪ್ರಶಾಂತ್ ಕಿಶೋರ್ ಮಂಗಳವಾರ ಗಾಂಧಿ ಪರಿವಾರವನ್ನು ಭೇಟಿ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾಗಾಂಧಿ, ವರಿಷ್ಠರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಅವರ ಈ ಭೇಟಿ ರಾಜಕೀಯ ವಲಯಗಳಲ್ಲಿ ನಾನಾ ಊಹಾಪೋಹಗಳಿಗೆ ಕಾರಣವಾಗಿದೆ. 2024ರ ಮಹಾ ಚುನಾವಣೆ ಹಿನ್ನೆಲೆಯಲ್ಲಿ ಅವರ ಈ ಭೇಟಿ ಮಹತ್ವ ಪಡೆದಿದೆ. ಶೀಘ್ರವೇ ಅವರು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ. ಅವರನ್ನು ಪಕ್ಷ ಚುನಾವಣಾ ರಣತಂತ್ರಗಾರರನ್ನಾಗಿ ನೇಮಿಸುವ ಸಾಧ್ಯತೆ ಇದೆ ಎಂಬ ಗುಲ್ಲು ಹಬ್ಬಿತು.

ಪ್ರತಿಷ್ಠಿತ ಸುದ್ದಿ ಮಾಧ್ಯಮವೊಂದರ ಪ್ರಕಾರ ಗಾಂಧಿ ಪರಿವಾರದೊಂದಿಗೆ ಪ್ರಶಾಂತ್ ಅವರ ಈ ಭೇಟಿ ಕೇವಲ ಪಂಜಾಬ್ ಮತ್ತು ಉತ್ತರ ಪ್ರದೇಶ ಚುನಾವಣೆ ಹಿನ್ನೆಲೆಯಲ್ಲಿ ಮಾತ್ರ ಅಲ್ಲ. 2024ರ ಸಾರ್ವತ್ರಿಕ ಚುನಾವಣಾ ಹಿನ್ನೆಲೆಯಲ್ಲೂ ಆಗಿದೆ. ಪ್ರಶಾಂತ್ ಕಿಶೋರ್ ಅವರು ಈ ಮೊದಲು ಅಂದರೆ 2017ರಲ್ಲೂ ಕಾಂಗ್ರೆಸ್ ಪಕ್ಷದೊಂದಿಗೆ ಕೆಲಸ ಮಾಡಿದ್ದಾರೆ. 2017ರಲ್ಲಿ ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ನಡುವೆ ಏರ್ಪಟ್ಟ ಮೈತ್ರಿ ಹಿನ್ನೆಲೆಯಲ್ಲಿ ಚುನಾವಣಾ ರಣತಂತ್ರ ರೂಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ್ದರು. ಆದರೆ ಆ ಸಂದರ್ಭದಲ್ಲಿ ಅವರಿಗೆ ಯಶಸ್ಸು ದೊರೆಯಲಿಲ್ಲ. ಆದರೆ ಪಂಜಾಬಿನ ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪ್ರಶಾಂತ್ ಕಿಸೋರ್ ಅವರೇ ಚುನಾವಣಾ ರಣತಂತ್ರಗಾರರಾಗಿ ಕೆಲಸ ಮಾಡಿ ಕಾಂಗ್ರೆಸ್ಸಿಗೆ ಗೆಲುವು ದೊರಕಿಸುವಲ್ಲಿ ಸಫಲರಾದರು.

ಪ್ರಶಾಂತ್ ಕಿಶೋರ್ ಕಳೆದ ಹಲವು ದಿನಗಳಿಂದ ತೀವ್ರವಾಗಿ ಸಕ್ರಿಯರಾಗಿರುವುದನ್ನು ಗಮನಿಸಬಹುದು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂತರಾಗಿ ವಿಪಕ್ಷಗಳ ವಿಭಿನ್ನ ನೇತಾರರನ್ನು ಭೇಟಿ ಮಾಡುತ್ತಿದ್ದಾರೆ. ಎನ್ ಸಿ ಪಿ ನಾಯಕ ಶರದ್ ಪವಾರ್ ಸೇರಿದಂತೆ ವಿಪಕ್ಷ ನಾಯಕರನ್ನು ಪ್ರತ್ಯೇಕವಾಗ ಭೇಟಿ ಮಾಡಿ, ಅವರ ನಡುವೆ ಏಕತೆ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಅವರನ್ನು ಒಂದೇ ರಾಜಕೀಯ ವೇದಿಕೆಗೆ ಕರೆ ತರುವ ಪ್ರಯಾಸಕ್ಕೆ ಕೈಹಾಕಿದ್ದಾರೆ.

ಕೇಂದ್ರದಲ್ಲಿ ಆಡಳಿತಾರೂಢ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಸಮಾನಮನಸ್ಕ ಪಕ್ಷಗಳನ್ನು ಒಗ್ಗೂಡಿಸಿ ಸಾಮಾನ್ಯ ಕಾರ್ಯಸೂಚಿ ಸಿದ್ದಾಂತದಡಿ ಕಾರ್ಯನಿರ್ವಹಿಸುವ ಉದ್ದೇಶ ಇದರ ಹಿಂದಿರಬಹುದು. ಮೂಲತಃ ಇದು ಮಮತಾ ಬ್ಯಾನರ್ಜಿ ಅವರ ಕಾರ್ಯಸೂಚಿಯ ಸೂಚನೆಯೂ ಆಗಿರಬಹುದು. ಇದರ ಜತೆಗೆ ಮೀಡಿಯಾಗಳಲ್ಲಿ ಮತ್ತು ರಾಜಕೀಯ ವಲಯಗಳಲ್ಲಿ ಸದಾ ಸುದ್ದಿಯಲ್ಲಿರುವ ಹಾಗೂ ಚರ್ಚೆಯಲ್ಲಿರುವ ತಂತ್ರಗಾರಿಕೆಯನ್ನೂ ಪ್ರಶಾಂತ್ ಕಿಶೋರ್ ಅನುಸರಿಸುತ್ತಿರಬಹುದು. ಸುದ್ದಿಯಲ್ಲಿರಲು ಆಗಿಂದಾಗ್ಗೆ ರಾಜಕೀಯ ಪಕ್ಷಗಳ ಮುಖಂಡರನ್ನು ಭೇಟಿ ಮಾಡುವ ಚಾಳಿ ಅವರಿಗೆ ಹೊಸದೇನೂ ಅಲ್ಲ. ಹೇಗಿದ್ದರೂ ಸದಾ ಸುದ್ದಿಯಲ್ಲಿರುವ ವಿಶಿಷ್ಟ ಚಾಣಾಕ್ಷತೆ ಅವರಲ್ಲಿ ಇದ್ದೇ ಇದೆ.

ಪ್ರಶಾಂತ್ ಕಿಶೋರ್ ಅವರು ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚುನಾವಣಾ ರಣತಂತ್ರಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಜೆಡಿಯು ಪಕ್ಷ ಸೇರಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಜತೆಯೂ ಕೈಜೋಡಿಸಿ ಕೆಲಸ ಮಾಡಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಜತೆ ಕೆಲಸ ಮಾಡಿ ಯಶಸ್ಸು ತಂದು ಕೊಟ್ಟ ಪ್ರಶಾಂತ್ ಇತ್ತೀಚೆಗೆ ನಡೆದ ಪಶ್ಚಿಮಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರಿಗೆ ನೀಡಿದ ಕೊಡುಗೆಯನ್ನು ಮರೆಯುವಂತಿಲ್ಲ.

ಹೀಗಾಗಿ ಪ್ರಶಾಂತ್ ಕಿಶೋರ್ ಅವರನ್ನು ರಾಜಕೀಯ ವಲಯಗಲ್ಲಿ ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಬೇರೆ ಬೇರೆ ರಾಜಕೀಯ ಪಕ್ಷಗಳು ಮತ್ತು ಅದರ ಮುಂಚೂಣಿ ಮುಖಂಡರು ಪ್ರಶಾಂತ್ ಕಿಶೋರ್ ಸಹಾಯ ಪಡೆದರೆ ಗೆಲುವು ಸಾಧ್ಯ ಎಂದು ಆಸೆಗಣ್ಣು ಬೀರುವಂತಾಗಿದೆ. ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಪ್ರಶಾಂತ್ ಅವರ ಚುನಾವಣಾ ತಂತ್ರಗಾರಿಕೆಯ ಸಹಾಯ ಪಡೆಯಬಹುದು. ಅದಕ್ಕಾಗಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕೆಂದೇನೂ ಇಲ್ಲ. ಅವರು ಪ್ರತಿಪಕ್ಷಗಳ ವಿಭಿನ್ನ ಕಾರ್ಯಸೂಚಿ ಹಿನ್ನೆಲೆಯಲ್ಲೂ ಗಾಂಧಿ ಪರಿವಾರವನ್ನು ಭೇಟಿ ಮಾಡಿರಬಹುದು. ಹಿರಿಯ ರಾಜಕೀಯ ನೇತಾರ ಶರದ್ ಪವಾರ್ ಅವರನ್ನು ಸಂಯುಕ್ತ ಅಭ್ಯರ್ಥಿಯಾಗಿ ಕಣಕ್ಕಿಳಿಸಬೇಕು ಎಂದು ವಿಷಯವೂ ಇದೆ. ಈ ಹಿನ್ನೆಲೆಯಲ್ಲೂ ಅವರು ಕಾಂಗ್ರೆಸ್ ವರಿಷ್ಠರನ್ನು ಭೇಟಿ ಮಾಡಿರುವ ಸಾಧ್ಯತೆ ಇದೆ.

ಆದರೆ ಗಾಂಧಿ ಪರಿವಾರದೊಂದಿಗಿನ ಭೇಟಿಯ ಉದ್ದೇಶದ ಕುರಿತು ಕಾಂಗ್ರೆಸ್ ಪಕ್ಷವಾಗಲಿ ಪ್ರಶಾಂತ್ ಕಿಶೋರ್ ಅವರಾಗಲಿ ಗಟ್ಟಿಯಾದ ಯಾವುದೇ ಸುಳಿವನ್ನು ಬಿಟ್ಟುಕೊಟ್ಟಿಲ್ಲ. ಹೀಗಾಗಿ ಭೇಟಿಯ ಉದ್ದೇಶ ಮಗುಮ್ಮಾಗಿದೆಯೇ ಹೊರತು ಯಾವ ಉದ್ದೇಶ ಅಥವಾ ಹಿನ್ನೆಲೆಯಲ್ಲಿ ಈ ಭೇಟಿ ನಡೆಯಿತು ಎಂದು ಸ್ಪಷ್ಟ ತೀರ್ಮಾನಕ್ಕೆ ಬರಲಾಗುವುದಿಲ್ಲ.

Spread the love

Related Articles

Leave a Reply

Your email address will not be published. Required fields are marked *

Back to top button