ಮೇಕೆದಾಟು ಯೋಜನೆ; ಪಾದಯಾತ್ರೆಗೆ ರೈತ ಸಂಘ ಸಿದ್ಧತೆ

ರಾಮನಗರ: ಮೇಕೆದಾಟು ಯೋಜನೆ ಶೀಘ್ರವಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆಯಲು ಕರ್ನಾಟಕ ರಾಜ್ಯ ಮೇಕೆದಾಟು ಹೋರಾಟ ಸಮಿತಿ ವತಿಯಿಂದ ಮೇಕೆದಾಟುವಿನಿಂದ ವಿಧಾನಸೌಧದವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ಸಂಪತ್ ಕುಮಾರ್ ತಿಳಿಸಿದ್ದಾರೆ.
ರಾಮನಗರದ ಎಪಿಎಂಸಿ ಮಾರುಕಟ್ಟೆಯ ರೈತ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ರೈತ ಮುಖಂಡರು, ಆಗಸ್ಟ್ 3ರಿಂದ 7ನೇ ತಾರೀಖಿನವರೆಗೆ ಬೃಹತ್ ಪಾದಯಾತ್ರೆ ಮಾಡಲಾಗುವುದು. ಕನಕಪುರದ ಮೇಕೆದಾಟಿನಿಂದ ಬೆಂಗಳೂರಿನ ವಿಧಾನಸೌಧದಿಂದ ಪಾದಯಾತ್ರೆ ನಡೆಸಲಾಗುತ್ತದೆ. ಈ ಪಾದಯಾತ್ರೆಯಲ್ಲಿ ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ತುಮಕೂರು ಜಿಲ್ಲೆಗಳಿಂದ ರೈತ ಮುಖಂಡರು, ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ರಾಜ್ಯ ಸರಕಾರ ಮೇಕೆದಾಟು ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಅನುಷ್ಠಾನಕ್ಕೆ ತರಬೇಕೆಂದು ಆಗ್ರಹಿಸಿದರು. ರೈತ ಮುಖಂಡರಾದ ಕೆ. ಮಲ್ಲಯ್ಯ ಕಲ್ಪನಾ ಶಿವಣ್ಣ ಮುಂತಾದವರು ಹಾಜರಿದ್ದರು.




