ಕೋಲಾರ: ಕೆರೆಗಳ ಸರ್ವೇಗೆ ಹೈಕೋರ್ಟ್ ಆದೇಶ; ಸಂರಕ್ಷಣೆಯ ನಿರೀಕ್ಷೆ

ಕೋಲಾರ: ರಾಜ್ಯ ಹೈಕೋರ್ಟ್ ಕೆರೆಗಳ ಸರ್ವೆ ಮಾಡುವಂತೆ ಆದೇಶ ಮಾಡಿದ್ದು, ಕೆರೆಗಳ ಪುನರುಜ್ಜೀವನಗೊಳಿಸದಿದ್ದರೆ ಹಕ್ಕುಗಳ ಹರಣ ಎಂದು ಅಭಿಪ್ರಾಯಪಟ್ಟಿದೆ. ಇದರಿಂದ ಕೋಲಾರ ಜಿಲ್ಲೆಯ ನೂರಾರು ಕೆರೆಗಳ ಸಂರಕ್ಷಣೆಯ ನಿರೀಕ್ಷೆ ಮೂಡಿದೆ.
ಕೆರೆಗಳ ನಾಡು ಕೋಲಾರದಲ್ಲಿ ಸುಮಾರು 1400 ಕ್ಕೂ ಹೆಚ್ಚು ಕೆರೆಗಳಿದ್ದು ಅದರಲ್ಲಿ ಬಹುತೇಕ ನೂರಾರು ಕೆರೆಗಳು ಖಾಸಗಿಯವರಿಂದ ಒತ್ತುವರಿಯಾಗಿವೆ.
ಪರಿಸರ ಸಮತೋಲನ ಕಾಯ್ದುಕೊಳ್ಳುವಲ್ಲಿ ಕೆರೆಗಳು ಮಹತ್ವದ ಪಾತ್ರ ವಹಿಸಲಿವೆ, ಅದರಲ್ಲೂ ಕೋಲಾರ ಜಿಲ್ಲೆಯಲ್ಲಿ ಕುಸಿದಿರುವ ಅಂತರ್ಜಲ ಸಮೃದ್ದಿ ಮಾಡಲು ಕೆರೆಗಳ ಸಂರಕ್ಷಣೆ ಬಹು ಪ್ರಮುಖವಾಗಿದೆ. ಹೈಕೋರ್ಟ್ ಆದೇಶವನ್ನು ಜಿಲ್ಲಾಧಿಕಾರಿಗಳು ಪಾಲಿಸಿ ಜಿಲ್ಲೆಯಾದ್ಯಂತ ಒತ್ತುವರಿಯಾಗಿರುವ ಕೆರೆಗಳನ್ನು ಸರ್ವೇ ಮಾಡಿಸಿ ಒತ್ತುವರಿ ತೆರವುಗೊಳಿಸಿದರೆ ಯಾವುದಾದರೂ ಮೂಲಗಳಿಂದ ಬರುವ ನೀರಿನಿಂದ ಕೆರೆಗಳು ತುಂಬಲಿದ್ದು ಅಂತರ್ಜಲ ವೃದ್ದಿಯಾಗಲಿದೆ.
ರಾಜ್ಯದಲ್ಲಿ ಬೆಂಗಳೂರು ನಗರ ಹೊರೆತುಪಡಿಸಿದರೆ ಅತೀ ಹೆಚ್ಚು ಕೆರೆಗಳ ಒತ್ತುವರಿಯಾಗಿರುವುದು ಕೋಲಾರ ಜಿಲ್ಲೆಯಲ್ಲಿಯೇ. ಯಾವುದೇ ನೀರಾವರಿ ಮೂಲಗಳಿಲ್ಲದಿದ್ದರೂ ವಾರ್ಷಿಕ ಬೀಳುವ ಮಳೆಯ ನೀರನ್ನೇ ಕೆರೆಗಳಲ್ಲಿ ಉಳಿಸಿಕೊಂಡು ವ್ಯವಸಾಯ ಮಾಡಲಾಗುತ್ತಿತ್ತು. ಕಳೆದ ಹತ್ತು ವರ್ಷಗಳಿಂದ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ತೀರ ಕಡಿಮೆಯಾಗಿ ಯಾವುದೇ ಕೆರೆ ಕುಂಟೆಗಳು ತುಂಬದ ಕಾರಣ ಕೆರೆ ಜಾಗಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಸರ್ಕಾರಗಳು ಯಾವುದಾದರೂ ಮೂಲಗಳಿಂದ ನೀರಾವರಿ ಯೋಜನೆಗಳನ್ನು ಕೈಗೊಂಡು ನೀರು ಹರಿಸುವ ಮೊದಲೇ ರಾಜ್ಯ ಹೈಕೋರ್ಟ್ ಆದೇಶದಂತೆ ಜಿಲ್ಲಾಧಿಕಾರಿಗಳು ಒತ್ತುವರಿಯಾಗಿರುವ ಜಿಲ್ಲೆಯ ಕೆರೆಗಳ ಸರ್ವೆ ಮಾಡಿಸಿ ಒತ್ತುವರಿ ತೆರವುಗೊಳಿಸಲು ಮುಂದಾಗಬೇಕಿದೆ.




