Breaking NewsLatestಕೊಡಗು

ಕೊಡಗಿನಲ್ಲಿ ವರುಣನ ಆರ್ಭಟ; ಇಂದು, ನಾಳೆ ರೆಡ್ ಅಲರ್ಟ್

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆಯಾಗುತ್ತಿದ್ದು, ಸುತ್ತಮುತ್ತ ಗ್ರಾಮಗಳಲ್ಲಿ ಮಳೆಯೊಂದಿಗೆ ಭಾರೀ ಗಾಳಿ ಬೀಸುತ್ತಿದೆ.
ಜೋಡುಪಾಲ, ಕೊಯನಾಡು ಮತ್ತು ಸಂಪಾಜೆ ಬಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಪಯಸ್ವಿನಿ ನದಿ ತುಂಬಿ ಹರಿಯುತ್ತಿದ್ದು, ಪ್ರವಾಹದಿಂದ ಕೊಯನಾಡು ಗ್ರಾಮದ ಸುತ್ತಮುತ್ತಲ ನಿವಾಸಿಗಳು ಆತಂಕಕ್ಕೀಡಾಗಿದ್ದಾರೆ. ಮಣ್ಣಿನ ರಾಶಿ ಮತ್ತು ಮರಗಳು ಕೊಚ್ಚಿಕೊಂಡು ಬರುತ್ತಿದ್ದು, ಇತ್ತೀಚೆಗೆ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಿರುಕಟ್ಟೆಯಿಂದ ಪ್ರವಾಹದ ಮಾರ್ಗ ಬದಲಾಗಿ ಅಪಾಯ ಸಂಭವಿಸಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಕ್ಷಣ ಕ್ಷಣಕ್ಕೂ ನದಿ ನೀರಿನ ಮಟ್ಟ ಏರಿಕೆಯಾಗುತ್ತಲೇ ಇದ್ದು, ಸ್ಥಳೀಯರು ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. 2018 ರಲ್ಲಿ ಇದೇ ಪ್ರದೇಶದಲ್ಲಿ ಅತಿವೃಷ್ಟಿಯಿಂದ ಸಂಭವಿಸಿದ ಸಾವು, ನೋವಿನ ಬಗ್ಗೆ ಇಲ್ಲಿಯವರು ನೆನಪಿಸಿಕೊಳ್ಳುತ್ತಿದ್ದಾರೆ.

ಬಿರುಗಾಳಿಗೆ ನೂರಾರು ಮರ ಮತ್ತು ವಿದ್ಯುತ್ ಕಂಬಗಳು ಧರೆಗುರುಳಿವೆ. ಮುಂದಿನ ಮೂರು ದಿನಗಳ ಕಾಲ ಮಳೆ ತೀವ್ರತೆಯನ್ನು ಪಡೆದುಕೊಳ್ಳಲಿರುವುದರಿಂದ ಜಿಲ್ಲಾಡಳಿತ ಗುರುವಾರ ಮತ್ತು ಶುಕ್ರವಾರ ರೆಡ್ ಅಲರ್ಟ್ ಘೋಷಿಸಿದೆ.

ಮಡಿಕೇರಿ ತಾಲ್ಲೂಕಿನ ವಿವಿಧೆಡೆ ಧಾರಾಕಾರ ಮಳೆಯಾಗುತ್ತಿದ್ದು, ರಸ್ತೆಗಳು ಜಲಾವೃತಗೊಂಡಿವೆ. ನಗರದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಮಂಗಳೂರು ರಸ್ತೆಯಲ್ಲಿ ಆತಂಕ ಸೃಷ್ಟಿಯಾಗಿದೆ. ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣಕ್ಕೆ ತಡೆಗೋಡೆ ನಿರ್ಮಿಸುವ ಕಾರ್ಯ ಅಪೂರ್ಣಗೊಂಡಿದ್ದು, ಅಕ್ಕಪಕ್ಕದ ಬರೆಗಳಿಂದ ಪ್ರವಾಹದ ರೀತಿಯಲ್ಲಿ ನೀರು ಹರಿದು ಬರುತ್ತಿದೆ. ಹೆದ್ದಾರಿ ಮೂಲಕ ನೀರು ರಭಸವಾಗಿ ಹರಿಯುತ್ತಿದ್ದು, ತಗ್ಗು ಪ್ರದೇಶದ ನಿವಾಸಿಗಳಲ್ಲಿ ಆತಂಕ ಮೂಡಿದೆ. ಇಲ್ಲಿ 6 ಮನೆಗಳ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದೆ.

ನಗರದ ಬಹುತೇಕ ರಸ್ತೆಗಳಲ್ಲಿ ನೀರು ತುಂಬಿದೆ. ಚರಂಡಿ, ತೋಡುಗಳು ತುಂಬಿ ಹರಿಯುತ್ತಿವೆ. ಪತ್ರಿಕಾಭವನ ರಸ್ತೆ, ಕಾವೇರಿ ಲೇಔಟ್, ಆಂಜನೇಯ ದೇವಾಲಯ ರಸ್ತೆ ಸೇರಿದಂತೆ ಹಲವೆಡೆ ರಸ್ತೆಗಳು ಜಲಾವೃತಗೊಂಡಿವೆ. ವಾಹನ ಮತ್ತು ಪಾದಚಾರಿಗಳ ಸಂಚಾರಕ್ಕೆ ಅಡಚಣೆಯಾಗಿದೆ. ಅತಿವೃಷ್ಟಿ ಅನಾಹುತವನ್ನು ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದ್ದು, ಎನ್‌ಡಿಆರ್‌ಎಫ್ ತಂಡ ಸನ್ನದ್ಧವಾಗಿದೆ.

ನಗರದಲ್ಲಿ ಸುರಿದ ಬಿರುಗಾಳಿ ಮಳೆಗೆ ನಗರದ ಆಕಾಶವಾಣಿ ಟವರ್ ನ ತಡೆಗೋಡೆ ಕುಸಿದು ಬಿದ್ದಿದೆ. ಟವರ್ ಅಪಾಯದಂಚಿನಲ್ಲಿದ್ದು, ಸಾರ್ವಜನಿಕ ವಲಯದಲ್ಲಿ ಆತಂಕ ಸೃಷ್ಟಿಯಾಗಿದೆ.

ಈ ಸ್ಥಳಕ್ಕೆ ಪೌರಾಯುಕ್ತ ರಾಮದಾಸ್ ಭೇಟಿ ನೀಡಿ ಪರಿಶೀಲಿಸಿದರು. ಮಳೆ ಹೆಚ್ಚಾದಲ್ಲಿ ಮತ್ತಷ್ಟು ಅಪಾಯ ಸಂಭವಿಸುವ ಸಾಧ್ಯತೆಗಳಿರುವುದರಿಂದ ರಸ್ತೆ ಸಂಚಾರ ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ನಗರದಲ್ಲಿ ಬೆಟ್ಟಗುಡ್ಡಗಳಲ್ಲಿರುವ ಮನೆಗಳ ನಿವಾಸಿಗಳಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದರು. ವಿವಿಧೆಡೆ ನೂರಾರು ಮರ ಮತ್ತು ವಿದ್ಯುತ್ ಕಂಬಗಳು ಧರೆಗುರುಳಿವೆ. ಮಡಿಕೇರಿ ನಗರ ಹಾಗೂ ಸೋಮವಾರಪೇಟೆಯಲ್ಲಿ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದು ಹಾನಿಯಾಗಿದೆ. ಟ್ರಾನ್ಸ್ ಫಾರ್ಮರ್ ಗಳು ನೆಲಕಚ್ಚಿದ್ದು, ಅಪಾರ ಹಾನಿ ಉಂಟಾಗಿದೆ. ಫೀ.ಮಾ.ಕಾರ್ಯಪ್ಪ ಕಾಲೇಜು ಬಳಿ ವಿದ್ಯುತ್ ಕಂಬಗಳು ಬಿದ್ದಿವೆ. ಜಿಲ್ಲೆಯಲ್ಲಿ ಆತಂಕದ ವಾತಾವರಣವಿದೆ.

ಜಡಿಮಳೆಯ ನಡುವೆಯೇ ಬಿದ್ದಿದ್ದ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿದ ಚೆಸ್ಕಾಂ ಸಿಬ್ಬಂದಿ ಸಂಚಾರಕ್ಕೆ ರಸ್ತೆಗಳನ್ನು ಮುಕ್ತಗೊಳಿಸಿದ್ದಲ್ಲದೆ ವಿದ್ಯುತ್
ಸಂಪರ್ಕವನ್ನು ನೀಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.

Spread the love

Related Articles

Leave a Reply

Your email address will not be published. Required fields are marked *

Back to top button