ವಾಡಿ ರೈಲ್ವೆ ಪೊಲೀಸರ ಕಾರ್ಯಚರಣೆ: ಮೂವರು ಕಳ್ಳರ ಬಂಧನ

ಕಲಬುರಗಿ : ರೈಲಿನಲ್ಲಿ ಪ್ರಯಾಣಿಕರ ಮೊಬೈಲ್ ಮತ್ತು ಪರ್ಸ್‌ಗಳನ್ನ ಕಳ್ಳತನ ಮಾಡುವುದು ಉದ್ಯೋಗ ಮಾಡಿಕೊಂಡಿದ್ದ ಮೂವರು ಮೊಬೈಲ್ ಕಳ್ಳರನ್ನ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ವಾಡಿ ರೈಲ್ವೆ ಜಂಕ್ಷನ್ ಪೊಲೀಸರು ಬಂಧಿಸಿದ್ದಾರೆ.
20 ವರ್ಷದ ಮಹೇಶ್, 21 ನಾಗಪ್ಪ ಮತ್ತು 21 ವರ್ಷದ ಭೀಮಣ್ಣ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳಿಂದ ಎರಡು ಲಕ್ಷ ಹದಿನಾರು ಸಾವಿರ ರೂಪಾಯಿ ಮೌಲ್ಯದ ವಿವಿಧ ಕಂಪನಿಯ 13 ಮೊಬೈಲ್‌ಗಳು ಮತ್ತು ನಗದು ಹಣವನ್ನ ಜಪ್ತಿ ಮಾಡಿಕೊಳ್ಳಲಾಗಿದೆ. ಇನ್ನೂ ವಾಡಿ ಪಟ್ಟಣವು ಜಂಕ್ಷನ್ ಆಗಿದ್ದು, ಈ ನಿಲ್ದಾಣದ ಮೂಲಕ ಮುಂಬಯಿ, ದೆಹಲಿ, ಬೆಂಗಳೂರು, ಹೈದ್ರಾಬಾದ್, ಪುಣೆ ಸೇರಿದಂತೆ ದೇಶದ ದೊಡ್ಡ ದೊಡ್ಡ ಮಹಾನಗರಗಳಿಗೆ ತೆರಳುವ ರೈಲುಗಳು ಹತ್ತರಿಂದ ಹದಿನೈದು ನಿಮಿಷಗಳ ಕಾಲ ನಿಲ್ಲುತ್ತವೆ. ಈ ಮಧ್ಯೆ ರೈಲುಗಳಿಗೆ ನುಗ್ಗುವ ಖದೀಮರು ಪ್ರಯಾಣಿಕರ ಸೋಗಿನಲ್ಲಿ ಹೋಗಿ ಮೊಬೈಲ್ ಮತ್ತು ಪರ್ಸ್‌ಗಳನ್ನ ಎಗರಿಸುತ್ತಿದ್ದರು.
ಈ ಬಗ್ಗೆ ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಅನೇಕ ದೂರುಗಳು ದಾಖಲಾಗಿದ್ದವು. ಇದರಿಂದ ರೈಲ್ವೆ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಖದೀಮರನ್ನ ಬಂಧಿಸುವಲ್ಲಿ ಸಫಲರಾಗಿದ್ದಾರೆ. ಈ ಕುರಿತು ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




