ರಾಜು ತಾಳಿಕೋಟೆ ಈಸ್ ಬ್ಯಾಕ್ ವಿತ್ ಇಬ್ಬರು ಹೆಂಡಿರು!

ಪೂರ್ಣ ವಿ-ರಾಮ
ರಾಜು ತಾಳಿಕೋಟೆ! ಬೀದಿ ನಾಟಕ ಮತ್ತು ಸಿನೆಮಾದಲ್ಲಿ ಈ ಹೆಸರಿಗೆ ಅದರದೇ ಆದ ಗತ್ತಿದೆ. ಕುಡುಕನ ಸೀರೀಸ್ ಆಫ್ ನಾಟಕಗಳಿಂದ ಕಾಮಿಡಿ ಟಾನಿಕ್ ಕುಡಿಸುತ್ತಿದ್ದ ರಾಜು, ಇತ್ತೀಚಿನ ದಿನಗಳಲ್ಲಿ ಊರು ಸೇರಿಕೊಂಡುಬಿಟ್ಟಿದ್ದರು. ಅಲ್ಲಿಯೇ ಹೊಲ ಊಳುವ ಕೆಲಸದಲ್ಲಿ ತೊಡಗಿಕೊಂಡಿದ್ದರು. ಅದೇ ರಾಜು ಇದೀಗ ಮತ್ತೆ ಜೂಮ್ ಆಗಿದ್ದಾರೆ. ಅದಕ್ಕೆ ಕಾರಣ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ ಹೊಸ ರಿಯಾಲಿಟಿ ಶೋ ರಾಜ ರಾಣಿ. ಒಂದಷ್ಟು ಜನಪ್ರಿಯ ಜೋಡಿಗಳನ್ನ ಸೇರಿಸಿ ಮಾಡುತ್ತಿರುವ ಈ ಕಾರ್ಯಕ್ರಮದಲ್ಲಿ ರಾಜು ತಾಳಿಕೋಟೆ ಮತ್ತವರ ಇಬ್ಬರು ಮುದ್ದಿನ ಹೆಂಡಿರು ಸ್ಪರ್ಧೆ ಮಾಡಲಿದ್ದಾರೆ!
ಮಿಕ್ಕೆಲ್ಲಾ ಜೋಡಿಗಳಿಗಿಂತ ರಾಜು ಮತ್ತು ಹೆಂಡತಿಯರು ಹೈಲೈಟ್ ಅನ್ನೋದರಲ್ಲಿ ಎರಡು ಮಾತಿಲ್ಲ. ಅದೇ ರಾಜು ತಾಳಿಕೋಟೆ BMG 24x7livekannada ಜೊತೆ ಮಾತಿಗೆ ಸಿಕ್ಕಿದ್ದರು. “ಕಲಿಯುಗದ ಕುಡುಕ” ಏನಂದ್ರು ನೀವೇ ಕೇಳಿ…!
-ನಮಸ್ಕಾರ್ ರೀ ಸರ? ಹೆಂಗದೀರಿ?!
ರಾಜು ತಾಳಿಕೋಟೆ: ಮಸ್ತ್ ಅದೀನ್ರೀ ಸರ. ಹೊಸ ಶೋ ಬರ್ಲಿಕ್ ಹತ್ತದ. ಪಾರ್ಟಿಸಿಪೇಟ್ ಮಾಡೋದ್ರಾಗ್ ಬಿಜಿ ಅದೇನ!
-ನೀವು ಮತ್ತು ನಿಮ್ಮ ಇಬ್ಬರು ಹೆಂಡತಿಯರನ್ನ ಶೋನಲ್ಲಿ ಹ್ಯಾಗೆ ಮ್ಯಾನೇಜ್ ಮಾಡ್ತೀರಿ?!
ರಾಜು ತಾಳಿಕೋಟೆ: ಹಹ್ಹಹ್ಹ…ಹೆಂಗ್ ಮ್ಯಾನೇಜ್ ಮಾಡ್ತೀರಿ ಅಂದ್ರ? ಮೂವತ್ತೈದು ವರ್ಷದಿಂದ ಮಾಡ್ತಾ ಇದೀನಲ್ಲಾ. ಇಬ್ಬರ ಹೆಸರೂ ಪ್ರೇಮಾ ಅಂತ. ಇಬ್ರೂ ನನ್ನನ್ನ ಒಂದೇ ತೂಕದಲ್ಲಿ ಪ್ರೀತಿ ಮಾಡ್ತಾರ. ಅವರಿಬ್ಬರ ಜೋಡಿ ಕೂಡಿ ಬಾಳಿದೀನಿ. ಇಲ್ಲಿ ಕೂಡಿ ಆಟ ಆಡ್ತೀನಿ ಅಷ್ಟೇ ವ್ಯತ್ಯಾಸ!
-ಬೆಂಗಳೂರಲ್ಲೇ ಇದೀರಾ ಅಥವಾ ಊರಿಂದ ಟ್ರಾವಲ್ ಮಾಡ್ತೀರೋ?
ರಾಜು ತಾಳಿಕೋಟೆ: ಊರಲ್ಲಿ ಹೊಲ ಐತ್ರೀ. ಲಾಕ್ ಡೌನ್ ಆದಾಗ ಶೂಟಿಂಗ್ ಇರಲಿಲ್ಲ. ಊರಲ್ಲೇ ಸೆಟಲ್ ಆಗಿದ್ವಿ. ಈ ಶೋಗೋಸ್ಕರ ವಾರಕ್ಕೊಂದ್ ಸಾರಿ ಬೆಂಗಳೂರಿಗೆ ಬರ್ತೀವಿ. ಕಾರಲ್ಲೇ ಟ್ರಾವಲ್ ಮಾಡ್ತೀವಿ. ಶೂಟಿಂಗ್ ಮುಗಿಸಿಕೊಂಡು ಮತ್ತೆ ಊರ್ ಕಡೆ ಹೊರಡ್ತೀವಿ!
-ಬೇರೆ ಸಿನೆಮಾ ಮಾಡ್ತಿಲ್ವಾ?
ರಾಜು ತಾಳಿಕೋಟೆ: ಇಲ್ರೀ…ಹೊಸ ಸಿನ್ಮಾ ಅಂತ ಯಾವ್ದೂ ಮಾಡ್ತಾ ಇಲ್ಲಾ. ಈ ಶೋಗೋಸ್ಕರಾನೇ ಬರ್ತೀವಿ ಅಷ್ಟೇ…ರಮೇಶ್ ಅರವಿಂದ್ ಅವ್ರ 100 ಡೇಸ್ ಅನ್ನೋ ಸಿನ್ಮಾ ಮಾತ್ರ ರಿಲೀಸ್ ಗೆ ರೆಡಿ ಐತಿ. ಅದು ಬಿಟ್ರೆ ಬೇರೆ ಯಾವ್ದೂ ಮಾಡ್ತಾ ಇಲ್ಲಾ ರೀ!
-ಸ್ಮಾಲ್ ಸ್ಕ್ರೀನ್ ಹೆಂಗೇರೀ ನಿಮ್ ಪ್ರಕಾರ?
ರಾಜು ತಾಳಿಕೋಟೆ: ಒಂಥರಾ ಮಜಾ ಕೊಡ್ತೈತ್ರೀ ಸರ. ಹಿಂದೆ ನಾನು ಕಾಮಿಡಿ ದರ್ಬಾರ್ ಅನ್ನೋ ಶೋಗೆ ಜಡ್ಜ್ ಆಗಿದ್ದೆ. ಬಿಗ್ ಬಾಸ್ ಗೂ ಬಂದುಹೋಗಿದ್ದೆ. ನಂಗೆ ಟಿವಿ ಏನ್ ಹೊಸತಲ್ಲ ಅನ್ನಬಹುದೂರಿ!
-ಹೊಲದ ಕೆಲಸ ಹೇಗೆ ನಡೀತಿದೆ?
ರಾಜು ತಾಳಿಕೋಟೆ: ಭೂಮಿತಾಯಿ ಸೇವೆ ಮಾಡೋದ್ರಾಗ ಇರೋ ಖುಷೀನೇ ಬೇರೆ ಐತ್ರಿ. ಹತ್ತೊಂಬತ್ತು ಎಕರೆ ಹೊಲ ಐತಿ. ಮುಖಕ್ಕೆ ಬಣ್ಣ ಹಚ್ಚೋದ್ರಾಗ ಸಿಗೋದ್ರ ಸಾವಿರ ಪಟ್ಟು ಸಾರ್ಥಕತೆ ಹೊಲದಾಗ ಕೆಲಸ ಮಾಡೋದ್ರಾಗ್ ಸಿಗತೈತ್ರೀ ಸರ!




