ಟೋಕಿಯೋ ಒಲಿಂಪಿಕ್ಸ್: ಪ್ರೇಕ್ಷಕರಿಗೆ ಪ್ರವೇಶವಿಲ್ಲ..!

ಟೋಕಿಯೋ : ಜಪಾನ್ ಸರಕಾರ ಟೋಕಿಯೋದಲ್ಲಿ ಕೋವಿಡ್-19 ತುರ್ತು ಪರಿಸ್ಥಿತಿ ಘೋಷಿಸಿರುವ ಹಿನ್ನೆಲೆಯಲ್ಲಿ ಇನ್ನು ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿರುವ ಟೋಕಿಯೋ ಒಲಿಂಪಿಕ್ಸ್ ಪ್ರೇಕ್ಷಕರಿಲ್ಲದೇ ನಡೆಯಲಿದೆ. “ಸ್ಪರ್ಧೆ ನಡೆಯುವ ಸ್ಥಳಗಳಿಗೆ ಪ್ರೇಕ್ಷಕರ ಪ್ರವೇಶಕ್ಕೆ ನಿಷೇಧ ಹೇರುವ ಒಪ್ಪಂದಕ್ಕೆ ನಾವು ತಲುಪಿದ್ದೇವೆ,” ಎಂದು ಜಪಾನಿನ ಒಲಿಂಪಿಕ್ಸ್ ಸಚಿವ ತಮಯೋ ಮರುಕವಾ ಹೇಳಿದ್ದಾರೆ.
ಜಪಾನ್ ಸರಕಾರ, ಟೋಕಿಯೋ ಒಲಿಂಪಿಕ್ಸ್ ಸಂಘಟಕರು, ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಪ್ರತಿನಿಧಿಗಳ ನಡುವೆ ಮಾತುಕತೆ ನಡೆದುದ್ದರಿಂದ ಒಲಿಂಪಿಕ್ಸ್ ಬಾಗಿಲು ಮುಚ್ಚಿದ ಕ್ರೀಡಾಂಗಣಗಳಲ್ಲಿ ನಡೆಯುಲಿದೆ.
ಇದು ವಿಷಾದದ ಸಂಗತಿ, ಕ್ರೀಡಾಕೂಟ ನಿಗದಿತ ಮಾದರಿಯಲ್ಲಿ ನಡೆಯಲಿದೆ. ಈಗಾಗಲೇ ಟಿಕೆಟ್ ಪಡೆದಿರುವವರಲ್ಲಿ ನಾವು ಕ್ಷಮೆಯಾಚಿಸುತ್ತಿದ್ದೇವೆ ಎಂದು ಟೋಕಿಯೋ ಒಲಿಂಪಿಕ್ಸ್ ಅಧ್ಯಕ್ಷರಾದ ಸಿಕೊ ಹಷಿಮೊಟೊ ಹೇಳಿದರು.
ಡೆಲ್ಟಾ ಕೋವಿಡ್ -19 ಸೋಂಕಿನಿಂದ ಟೋಕಿಯೋವನ್ನು ರಕ್ಷಿಸಬೇಕಾಗಿದೆ. ಇನ್ನೊಂದು ಅಲೆ ಹಬ್ಬದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಜಪಾನ್ ಪ್ರಧಾನಿ ಯೊಷಿಹಿಡೆ ಸುಗಾ ಹೇಳಿದ್ದಾರೆ.
ಟೋಕಿಯೋದಲ್ಲಿ ಬುಧವಾರ 920 ಕೋರೋನಾ ಪ್ರಕರಣಗಳು ದಾಖಲಾಗಿದ್ದು, ಇದು ಮೇ ತಿಂಗಳ ನಂತರ ಗರಿಷ್ಠ ಎನ್ನಲಾಗಿದೆ. ಜಪಾನ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಒಲಿಂಪಿಕ್ಸ್ ಆಯೋಜಿಸಲು ವಿರೋಧ ವ್ಯಕ್ತಪಡಿಸಿದ್ದಾರೆ.
ಒಂದು ವೇಳೆ ಒಲಿಂಪಿಕ್ಸ್ ನಿಂತರೆ ಅಂತರರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಗೆ ಪ್ರಸಾರದ ಹಕ್ಕಿನಿಂದಲೇ ಸುಮಾರು 30,000 ಕೋಟಿ ರೂ. ನಷ್ಟವಾಗಲಿದೆ. ಜುಲೈ 23ರಿಂದ ಆರಂಭಗೊಳ್ಳಲಿರುವ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಸುಮಾಆರು 11,000 ಒಲಿಂಪಿಯನ್ನರು, 4,400 ಪ್ಯಾರಾಲಿಂಪಿಯನ್ನರು, 10,000 ಅಧಿಕಾರಿಗಳು, ತೀರ್ಪುಗಾರರು, ಆಡಳಿತಗಾರರು, ಪ್ರಾಯೋಜಕರು, ಪ್ರಸಾರಕರು ಮತ್ತು ಮೀಡಿಯಾ ಪ್ರತಿನಿಧಿಗಳು ಜಪಾನ್ ಪ್ರವೇಶಿಸಲಿದ್ದಾರೆ.
