ಹಿಂಬಡ್ತಿ ವಾಪಸಾತಿಗೆ ಆಗ್ರಹಿಸಿ ಪದವೀಧರ ಶಿಕ್ಷಕರ ಪ್ರತಿಭಟನೆ

ರಾಮನಗರ: ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರಿಗೆ ನೇಮಕಾತಿ ನಿಯಮಗಳು ಮತ್ತು ಮುಂಬಡ್ತಿ ನೀಡುವಲ್ಲಿ ಅನ್ಯಾಯವಾಗಿದೆ ಎಂದು ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘ ಪದಾಕಾರಿಗಳು ಸಂಕೇತವಾಗಿ ಪ್ರತಿಭಟನೆ ನಡೆಸಿ, ಚನ್ನಪಟ್ಟಣ ತಾಲೂಕು ಶಿಕ್ಷಣ ಇಲಾಖೆ ಬಿಆರ್‌ಸಿ ಅಧಿಕಾರಿ ಕುಸುಮಲತಾ ಅವರಿಗೆ ಸರಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘ ಪದಾಕಾರಿಗಳು ಮನವಿ ಸಲ್ಲಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಸೇವಾ ನಿಯಮ ಉಲ್ಲೇಖ 1 ಮತ್ತು 2ರ ಅನ್ವಯ 2006ಕ್ಕಿಂತ ಪೂರ್ವದಲ್ಲಿ ನೇಮಕವಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಉಲ್ಲೇಖ 3ರ ಅನ್ವಯ 1ರಿಂದ 5ನೇ ತರಗತಿ ಬೋಧನೆ ಮಾಡುತ್ತಿದ್ದವರನ್ನು ಪದನಾಮಕರಿಸಿ, ಅವರ ಸೇವಾಜೇಷ್ಟತೆ ಮತ್ತು ಪದವಿ ವಿದ್ಯಾರ್ಹತೆಯನ್ನು ಪರಿಗಣಿಸದೇ ಹಿಂಬಡ್ತಿ ನೀಡಿದಂತಾಗಿದೆ.
25 ವರ್ಷಗಳಿಂದ 6ರಿಂದ 8ನೇ ತರಗತಿಗಳನ್ನು ಭೋದಿಸುತ್ತಿರುವ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರು ಪಡೆದಿರುವ ವಿವಿಧ ಪದವಿಗಳಿಗೆ ಯಾವುದೇ ಮಾನ್ಯತೆ ಇಲ್ಲದಂತಾಗಿದೆ. ಅಲ್ಲದೆ ಪ್ರೌಢಶಾಲಾ ಸಹ ಶಿಕ್ಷಕರ ಗ್ರೇಡ್ 2 ಹುದ್ದೆಗಳಿಗೆ ಮುಂಬಡ್ತಿ ನೀಡುವಲ್ಲಿ ಅನ್ಯಾಯವಾಗಿದೆ ಎಂದು ಸಂಘದ ಪದಾಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಹಲವಾರು ಬಾರಿ ಶಾಂತಿಯುತವಾಗಿ ಉಪವಾಸ ಸತ್ಯಾಗ್ರಹ, ಬೋಧಾನಾ ಬಹಿಷ್ಕಾರದಂತ ಹೋರಾಟ ಮಾಡಿಕೊಂಡು ಬರುತ್ತಿದ್ದರೂ ಇಲಾಖೆ ಅಕಾರಿಗಳು ಮತ್ತು ಸರಕಾರ ಯಾವುದೇ ಕ್ರಮವಹಿಸದೇ ವಿಳಂಭ ನೀತಿ ಅನುಸರಿಸುತ್ತಿದೆ. ಇನ್ನಾದಾರೂ ಈ ಬಗ್ಗೆ ಸಂಬಂಧಪಟ್ಟವರು ನಮಗೆ ನ್ಯಾಯ ಒದಗಿಸಬೇಕು ಇಲ್ಲವಾದಲ್ಲಿ ಮುಂದಿನ ಶೈಕ್ಷಣಿಕಾ ದಿನಗಳಲ್ಲಿ 6ರಿಂದ 8ನೇ ತರಗತಿಗಳ ಪಾಠಬೋಧನಾ ಬಹಿಷ್ಕಾರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಈ ವೇಳೆ ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ್, ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಎಂ. ನಾಗೇಶ್, ಮಲ್ಲೇಶ್, ನಿರ್ದೇಶಕರಾದ ಬೆಟ್ಟಯ್ಯ, ಶಿವಕುಮಾರ್, ಕವಿತಾ ಸೇರಿದಂತೆ ಪದಾಕಾರಿಗಳು ಮತ್ತು ತಾಲೂಕು ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷ ರವಿಕುಮಾರ್, ಗೌರವಾಧ್ಯಕ್ಷ ದ್ಯಾವೇಗೌಡ, ಕಾರ್ಯದರ್ಶಿ ಪಿ. ಸುರೇಶ್. ಜಿಲ್ಲಾ ಕಾರ್ಯದರ್ಶಿ ಸೋಮಣ್ಣ ಇನ್ನೂ ಹಲವರು ಈ ವೇಳೆ ಭಾಗವಹಿಸಿದ್ದರು.




