ಖ್ಯಾತ ನಟ ದಿಲೀಪ್ಕುಮಾರ್ ನಿಧನ

ಮುಂಬೈ: ಹಿಂದಿ ಚಿತ್ರರಂಗದ ಖ್ಯಾತ ನಟ ದಿಲೀಪ್ಕುಮಾರ್ ನಿಧನರಾಗಿದ್ದಾರೆ. ಅವರಿಗೆ 98 ವರ್ಷ ವಯಸ್ಸಾಗಿತ್ತು.
ಉಸಿರಾಟದ ತೊಂದರೆಗೆ ಒಳಗಾಗಿದ್ದ ಅವರನ್ನು ಕಳೆದ ಬುಧವಾರ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಕ್ಕೂ ಮೊದಲು ಜೂನ್ 6ರಂದು ಕೂಡ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಜೂನ್ 11ರಂದು ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.
ದೀರ್ಘಕಾಲದಿಂದ ಅನಾರೋಗ್ಯ ಪೀಡಿತರಾಗಿದ್ದ ಅವರು ಈ ಬಾರಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ದಿಲೀಪ್ಕುಮಾರ್ ನಿಧನದ ಕುರಿತು ಅವರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಕುಟುಂಬದ ಸ್ನೇಹಿತರು ಪ್ರಕಟಿಸಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿ ಮೈಲುಗಲ್ಲಾದ ಸಿನಿಮಾಗಳಲ್ಲಿ ಅವರು ಮಿಂಚಿದ್ದರು. ನಯಾ ದೌರ್, ಮುಘಲ್-ಎ-ಆಜಂ, ದೇವ್ದಾಸ್, ಅಂದಾಜ್, ಗಂಗಾ ಜಮುನಾ ಮಿದಲಾದ ಚಿತ್ರಗಳಲ್ಲಿನ ನಟನೆ ಅವರನ್ನು ಖ್ಯಾತಿಯ ಉತ್ತುಂಗಕ್ಕೆ ಕರೆದೊಯ್ದಿತ್ತು.
ಹಲವು ದಶಕಗಳ ಕಾಲ ಚಿತ್ರರಂಗವನ್ನು ಆಳಿದ್ದ ಅವರು ದುರಂತ ಪ್ರೇಮಕಥೆಗಳ ನಾಯಕನಾಗಿ ಚಿತ್ರಪ್ರೇಮಿಗಳ ಎದೆ ತುಂಬಿದ್ದರು. 1998ರಲ್ಲಿ ಬಿಡುಗಡೆಯಾದ ಖಿಲಾ ಅವರ ನಟನೆಯ ಕೊನೇ ಚಿತ್ರವಾಗಿತ್ತು.
ಚಿತ್ರರಂಗವನ್ನಾಳಿದ ಬಾಲ್ಯಸ್ನೇಹಿತರು
ಬ್ರಿಟಿಷ್ ಆಳ್ವಿಕೆಯ ಭಾರತದ ಪೇಷಾವರದಲ್ಲಿ 1922ರಲ್ಲಿ ಹಣ್ಣು ವ್ಯಾಪಾರಿ ತಂದೆಯ 12 ಮಕ್ಕಳಲ್ಲಿ ಒಬ್ಬರಾಗಿ ಜನಿಸಿದ್ದ ದಿಲೀಪ್ಕುಮಾರ್ ಮೂಲ ಹೆಸರು ಯೂಸುಫ್ ಖಾನ್. ನಾಸಿಕ್ನಲ್ಲಿ ಮತ್ತೊಬ್ಬ ಬೆಳೆಯುತ್ತಿದ್ದ ಹೊತ್ತಿನಲ್ಲಿ ರಾಜ್ ಕಪೂರ್ ಇವರ ಗೆಳೆಯರಾಗಿದ್ದರು. ಬಾಲ್ಯದ ಗೆಳೆಯರಿಬ್ಬರೂ ಮುಂದೆ ಭಾರತೀಯ ಚಿತ್ರರಂಗದ ದೊಡ್ಡ ಹೆಸರಾದದ್ದು ಈಗ ಇತಿಹಾಸ.
1940ರ ದಶಕದಿಂದ ಆರಂಭವಾದ ಅವರ ಚಿತ್ರವೃತ್ತಿ ಬದುಕು, ಮುಂದೆ 1998ರ ಖಿಲಾ ಚಿತ್ರದವರೆಗೂ ಅವ್ಯಾಹತವಾಗಿ ಮುಂದುವರಿಯಿತು. 2000ದ ನಂತರವೂ ಕೆಲವು ಪ್ರಾಜೆಕ್ಟ್ಗಳಲ್ಲಿ ಅವರು ಕಾಣಿಸಿಕೊಳ್ಳುವ ಪ್ರಸ್ತಾಪವದ್ದರೂ ಕೈಗೂಡಲಿಲ್ಲ.
ಒಲವಿನ ಮಧುಬಾಲಾ; ಮಡದಿಯಾದ ಸಾಯಿರಾ
ತರಣ ಚಿತ್ರದ ಚಿತ್ರೀಕರಣದ ವೇಳೆ ಆಗಿನ ಮೋಹಕ ತಾರೆ ಮಧುಬಾಲಾ ಪ್ರೇಮದಲ್ಲಿ ಬಿದ್ದಿದ್ದ ದಿಲೀಪ್ಕುಮಾರ್, ಬಹುಕಾಲ ಅವರೊಂದಿಗೆ ಸಂಬಂಧ ಹೊಂದಿದ್ದರು. ತೆರೆಯ ಮೇಲೆ ಮಿನುಗುತ್ತಿದ್ದ ಈ ಜೋಡಿ ನಿಜಜೀವನದಲ್ಲಿ ಒಂದಾಗಲು ಆಗಲಿಲ್ಲ. ಮಧುಬಾಲಾ ತಂದೆಯ ವಿರೋಧವಿದ್ದ ಕಾರಣ, ಆ ಸಂಬಂಧದಿಂದ ಹೊರಬರಬೇಕಾಯಿತು. 1960 ಮುಘಲ್-ಎ-ಆಜಂ ಬಳಿಕ ಆ ಜೋಡಿ ಮತ್ತೆಂದೂ ತೆರೆ ಹಂಚಿಕೊಳ್ಳಲಿಲ್ಲ.
1950ರ ವೇಳೆಯಲ್ಲಿ ನಟಿ ವೈಜಯಂತಿಮಾಲಾ ಜೊತೆ ದಿಲೀಪ್ಕುಮಾರ್ ಹೆಸರು ತಳುಕು ಹಾಕಿಕೊಂಡಿತ್ತು. ಬೇರೆ ನಟಿಯರಿಗೆ ಹೋಲಿಸಿದರೆ ವೈಜಯಂತಿಮಾಲಾ ಜೊತೆಗಿನ ದಿಲೀಪ್ಕುಮಾರ್ ಚಿತ್ರಗಳೇ ಹೆಚ್ಚು. ಅವರಿಬ್ಬರ ಕೆಮೆಸ್ಟ್ರಿ ಬಗ್ಗೆ ಕೂಡ ಮೆಚ್ಚುಗೆಯ ಮಾತುಗಳಿದ್ದ ಕಾಲ ಅದಾಗಿತ್ತು.
ಇದೆಲ್ಲದರ ಬಳಿಕ 1966ರಲ್ಲಿ ತಮಗಿಂತ 22 ವರ್ಷ ಕಿರಿಯಳಾದ ನಟಿ ಸಾಯಿರಾ ಬಾನು ಜೊತೆ ದಿಲೀಪ್ಕುಮಾರ್ ವಿವಾಹವಾದರು. 1981ರಲ್ಲಿ ಅಸ್ಮಾ ಸಾಹಿಬಾ ಅವರನ್ನು ಮದುವೆಯಾದರಾದರೂ ಅದು ಬಾಳಲಿಲ್ಲ. ಅವರೊಂದಿಗಿನ ದಾಂಪತ್ಯ 1983ರಲ್ಲಿ ಕೊನೆಯಾಯಿತು. ದಲೀಪ್-ಸಾಯಿರಾ ದಂಪತಿಗೆ ಮಕ್ಕಳಿರಲಿಲ್ಲ.
ಕ್ರಿಕೆಟ್ ಪ್ರೇಮಿ ನಟ
ಉರ್ದು, ಹಿಂದಿ, ಪಂಜಾಬ್, ಮರಾಠಿ, ಇಂಗ್ಲಿಷ್, ಬಂಗಾಲಿ, ಗುಜರಾತಿ, ಪರ್ಷಿಯನ್, ಅವಧಿ ಮೊದಲಾದ ಭಾಷೆಗಳನ್ನು ಸ್ಫುಟವಾಗಿ ಮಾತನಾಡಬಲ್ಲವರಾಗಿದ್ದ ದಿಲೀಪ್ಕುಮಾರ್ ಸಂಗೀತದ ಬಗ್ಗೆಯೂ ಒಲವುಳ್ಳವರಾಗಿದ್ದರು. ಕ್ರಿಕೆಟ್ ಎಂದರೆ ಅವರಿಗೆ ಅಚ್ಚುಮೆಚ್ಚಾಗಿತ್ತು.
ಭಾರತೀಯ ಚಿತ್ರರಂಗಕ್ಕೆ ಕೊಡುಗೆಗಾಗಿ 2015ರಲ್ಲಿ ಅವರಿಗೆ ಪದ್ಮವಿಭೂಷಣ ಗೌರವ ಸಂದಿತ್ತು. 2000ದಿಂದ 2006ರವರೆಗೆ ಅವರು ರಾಜ್ಯಸಭಾ ಸದಸ್ಯರಾಗಿದ್ದರು. ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ, ಪದ್ಮಭೂಷಣ, ಮೊದಲಾದ ಗೌರವಗಳು ಅವರಿಗೆ ಒಲಿದಿದ್ದವು.
