ಅಧಿಕಾರಿಗಳಿಗೆ ಚಿನ್ನದ ಮೊಟ್ಟೆಯಾದ ನಾಗರಾಳ ಡ್ಯಾಂ ನೀರಾವರಿ ಯೋಜನೆ: ರೈತರಿಗೆ ಸಿಗದ ಲಾಭ

ಕಲಬುರಗಿ: ಅನ್ನದಾತರ ಬದುಕು ಹಸನು ಮಾಡುವ ನೀರಾವರಿ ಯೋಜನೆಗಳು ಇರುತ್ತವೆ. ಆದರೆ, ಕಲಬುರಗಿಯಲ್ಲಿ ಮಾತ್ರ ನೀರಾವರಿ ಯೋಜನೆಗಳು ಕೇವಲ ಹಣ ಹೊಡೆಯುದಕ್ಕೆ ಸೀಮಿತವಾದಂತಾಗಿದೆ. ಕಣ್ಮುಂದೆ ಡ್ಯಾಂಗಳಿದ್ದರು ರೈತರಿಗೆ ಹನಿ ನೀರು ಸಿಗದಂತಾಗಿದೆ.
ಚಿಂಚೋಳಿ ತಾಲ್ಲೂಕಿನ ನಾಗಾರಳ ಡ್ಯಾಂ ನಿರಾವರಿ ಯೋಜನೆ ಬ್ರಹ್ಮಾಂಡ ಭ್ರಷ್ಟಾಚಾರದ ಕೂಪವಾಗಿದೆ. ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ನೀರಾವರಿ ಇಲಾಖೆ ಅನ್ನೋ ಹಾಗಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ಚಿಂಚೋಳಿ ತಾಲ್ಲೂಕಿನ ನಾಗರಾಳ ಡ್ಯಾಂ ನ ಕಾಲುವೆ ನವೀಕರಣ, ಡ್ರೀಪ್ ಸಿಸಿ ವರ್ಕ್ ಹಾಗೂ ಪುನರ್ವಸತಿ ಕೇಂದ್ರಗಳ ಅಭಿವೃದ್ಧಿಗಾಗಿ ಕೋಟಿ ಕೋಟಿ ಹಣ ಖರ್ಚು ಮಾಡಲಾಗಿದೆ. ಆದರೆ ಅಧಿಕಾರಿಗಳ, ಗುತ್ತಿಗೆದಾರರ ಧನದಾಹಕ್ಕೆ ಕಳಪೆ ಕಾಮಗಾರಿಯಿಂದ ಕೆಲಸ ಹಳ್ಳ ಹಿಡಿದಿದೆ.
80 ಕಿ. ಮೀಟರ್ ಕಾಲುವೆ ನವೀಕರಣಕ್ಕಾಗಿ 120 ಕೋಟಿ, ಡ್ರೀಪ್ ಸಿಸಿ ವರ್ಕ್ ಗಾಗಿ 38 ಕೋಟಿ ಹಾಗೂ ಪುನರ್ವಸತಿ ಕೇಂದ್ರಗಳಿಗೆ ಮೂಲಭೂತ ಸೌಲಭ್ಯ ಹಾಗೂ ಅಭಿವೃದ್ಧಿ ಕಾಮಗಾರಿಗಾಗಿ 18 ಕೋಟಿ ವೆಚ್ಚದಲ್ಲಿ ಸ್ಟಾರ್ ಹಾಗೂ ಆದಿತ್ಯ ಬಿಲ್ಡರ್ಸ್ ಗುತ್ತಿಗೆದಾರರು ಕಳೆದ ಎರಡು ವರ್ಷಗಳಿಂದ ಕಾಮಗಾರಿ ಕೈಗೊಂಡಿದ್ದಾರೆ. ಕಾಮಗಾರಿ ಇನ್ನೂ ಪೂರ್ಣವೇ ಆಗಿಲ್ಲ. ಆಗಲೇ ಮಾಡಿರುವ ಕಾಲವೆ ಹಾಗೂ ಸಿಸಿ ವರ್ಕ್ ಕಿತ್ತುಬಿದ್ದಿದೆ. ಗುತ್ತಿಗೆದಾರರು ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ಕಳಪೆ ಕಾಮಗಾರಿ ಮಾಡಿ ಕೋಟಿ ಕೋಟಿ ಹಣ ಕೊಳ್ಳೆ ಹೊಡೆದಿದ್ದಾರೆ. ಸ್ಥಳೀಯ ಶಾಸಕ ಅವಿನಾಶ್ ಜಾಧವ್ ಅವರ ಸಹಕಾರವೂ ಇದೆ ಅಂತಾ ಸ್ಥಳೀಯ ಮುಖಂಡರು, ರೈತರು ಗಂಭೀರ ಆರೋಪ ಮಾಡ್ತಿದ್ದಾರೆ. ಅಲ್ಲದೆ ಅಕ್ರಮ ಎಸಗಿರುವ ಅಧಿಕಾರಿಗಳ, ಗುತ್ತಿಗೆದಾರರ ವಿರುದ್ದ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ.

1973 ಬರಗಾಲ ಸಂದರ್ಭದಲ್ಲಿ ನಾಗರಾಳ ಡ್ಯಾಂ ನಿರ್ಮಾಣ ಮಾಡಲಾಗಿದೆ. ಇಲ್ಲಿನ ಜನರಿಗೆ ಕುಡಿಯುವ ನೀರು ಹಾಗೂ ಕೃಷಿಗಾಗಿ ಡ್ಯಾಂ ನೀರು ಸದ್ಬಳಕೆ ಸದುದ್ದೇಶದಿಂದ ಸಾವಿರಾರು ಕೋಟಿ ಖರ್ಚು ಮಾಡಿ ಜಲಾಶಯ ನಿರ್ಮಾಣ ಮಾಡಲಾಗಿದೆ. ಸುಮಾರು 20 ಹೆಕ್ಟೇರ್ ಪ್ರದೇಶದ ಕೃಷಿ ಜಮೀನಿಗೆ ನಾಗರಾಳ ಡ್ಯಾಂ ನೀರು ಬಳಕೆ ಆಗಬೇಕು. ಆದರೆ, ಹನಿ ನೀರು ಕೂಡ ರೈತರ ಜಮೀನಿಗೆ ಹರಿದಿಲ್ಲ ಅಂತಾ ರೈತರು ಕಿಡಿ ಕಾರುತ್ತಿದ್ದಾರೆ. ಕಾಲುವೆ ನವೀಕರಣಕ್ಕಾಗಿ, ನಿರ್ವಹಣೆಗಾಗಿ ಬಿಡುಗಡೆ ಆಗುವ ಕೋಟಿ ಕೋಟಿ ಹಣ ಕಳಪೆ ಕಾಮಗಾರಿ ಮೂಲಕ ಅಧಿಕಾರಿಗಳ, ಗುತ್ತಿಗೆದಾರರ ಹಾಗೂ ಸ್ಥಳೀಯ ಜನಪ್ರತಿನಗಳ ಜೇಬು ಸೇರುತ್ತಿದೆ ಹೊರತು ಅನ್ನದಾತರ ಬದುಕು ಬದಲಾಗಿಲ್ಲ ಅಂತಾ ರೈತರು ಬೇಸರಿಂದ ನೋವು ತೋಡಿಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ ರಾಜ್ಯ ಸರ್ಕಾರ ನೀರಾವರಿ ಯೋಜನೆಗಳಿಗೆ ಕೋಟಿ ಕೋಟಿ ಹಣ ವ್ಯಯ ಮಾಡೋದು ರೈತರ ಬದುಕು ಹಸನಾಗಲಿ ಅಂತಾ. ಆದರೆ, ಕಲಬುರಗಿಯಲ್ಲಿ ಭಾಗಶಃ ನೀರಾವರಿ ಯೋಜನೆಗಳು ಕಳಪೆ ಕಾಮಗಾರಿಯಿಂದ ಹಳ್ಳ ಹಿಡಿದಿವೆ. ಅಧಿಕಾರಿಗಳು, ಗುತ್ತಿಗೆದಾರರಿಗೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಚಿನ್ನದ ಮೊಟ್ಟೆ ಇಡುವ ಕೊಳಿಯಂತಾಗಿವೆ ನೀರಾವರಿ ಯೋಜನೆಗಳು. ಇನ್ನಾದರೂ ನೀರಾವರಿ ಸಚಿವರು ಇಂತಹ ಕೊಳ್ಳೆ ಅಧಿಕಾರು, ಗುತ್ತಿಗೆದಾರರತ್ತ ಚಿತ್ತ ಹರಿಸಬೇಕಿದೆ.




