ಸರಕಾರದ ಅನುದಾನವನ್ನು ಅಧಿಕಾರಿಗಳು ಎಚ್ಚರಿಕೆಯಿಂದ ವಿನಿಯೋಗಿಸಬೇಕು: ಸಂಸದ ಅನಂತಕುಮಾರ್ ಹೆಗಡೆ

ಕಾರವಾರ : ಜಲ ಜೀವನ ಮಿಷನ್, ನರೇಗಾ, ವಸತಿ, ಆರೋಗ್ಯ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ ನೇರವಾಗಿ ನೀಡುತ್ತಿರುವ ವಿಶೇಷ ಅನುದಾನದ ಬಳಕೆ ಬಗ್ಗೆ ಕೇಂದ್ರ ಸರಕಾರ ಹದ್ದಿನ ಕಣ್ಣಿಟ್ಟಿದ್ದು, ಸಂಬಂಧಪಟ್ಟ ಅಧಿಕಾರಿಗಳು ಅತ್ಯಂತ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ಸಂಸದ ಅನಂತಕುಮಾರ್ ಹೆಗಡೆ ಅವರು ಹೇಳಿದರು.
ಜಿಲ್ಲಾ ಪಂಚಾಯತ್ನ ಸಭಾಭವನದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಜನರಿಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದು, ಅಂತಹ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಕೋಟ್ಯಾಂತರ ರೂಪಾಯಿ ವಿಶೇಷ ಅನುದಾನ ನೀಡುತ್ತಿದೆ. ಆದರೆ ಜಲ ಜೀವನ ಮಿಷನ್ನಡಿ ಜಿಲ್ಲೆಯಾದ್ಯಂತ ಕೈಗೊಂಡಿರುವ ಕಾಮಗಾರಿಯ ಬಗ್ಗೆ ಶಾಸಕರು ಸೇರಿದಂತೆ ಯಾವೊಬ್ಬ ಜನಪ್ರತಿನಿಧಿಗಳಿಗೂ ಮಾಹಿತಿಯೇ ಇಲ್ಲ ಎಂದರು.
ಆಗ ಮಧ್ಯ ಪ್ರವೇಶಿಸಿ ಮಾತನಾಡಿದ ಶಾಸಕಿ ರೂಪಾಲಿ ನಾಯ್ಕ, ಜನಪ್ರತಿನಿಧಿಗಳಿಗೆ ತಿಳಿಸದೇ ಅಧಿಕಾರಿಗಳು ನೇರವಾಗಿ ತಮಗೆ ತಿಳಿದಂತೆ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದ್ದೀರಿ, ಅಧಿಕಾರಿಗಳ ಈ ನಡವಳಿಕೆಯಿಂದ ಮುಂಬರುವ ದಿನಗಳಲ್ಲಿ ಯೋಜನೆ ವಿಫಲವಾಗುವ ಸಾಧ್ಯತೆಯಿದೆ ಎಂದು ಸಭೆಯಲ್ಲಿ ಧ್ವನಿ ಎತ್ತಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ಶಾಸಕರು ಹೇಳಿರುವುದು ಸತ್ಯವಾಗಿದೆ.ಮನೆ ಮನೆಗೆ ನೀರನ್ನು ಒದಗಿಸಬೇಕು.ಜನರ ದಾಹವನ್ನು ತಣಿಸಬೇಕು ಎಂಬ ಉದ್ದೇಶದಿಂದ ಕೇಂದ್ರ ಸರಕಾರ ಜಲ ಜೀವನ ಮಿಷನ್ ಜಾರಿಗೆ ತಂದಿದೆ. ಇಂತಹ ಮಹತ್ವಾಕಾಂಕ್ಷೆ ಯೋಜನೆಯನ್ನು ಸಾರ್ವಜನಿಕರ ಹಾಗೂ ಜನಪ್ರತಿನಿಧಿಗಳ ಸಹಭಾಗಿತ್ವದಲ್ಲಿ ಅನುಷ್ಠಾನಕ್ಕೆ ತರಬೇಕು. ಆಗ ಯೋಜನೆಯ ಬಗ್ಗೆ ಜನರಿಗೆ ತಿಳಿಯುವುದರ ಜೊತೆಗೆ ಹೆಚ್ಚಿನ ಪ್ರಚಾರವೂ ಸಿಗುತ್ತದೆ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಿದ್ದು, ಸರಕಾರಿ ಅಧಿಕಾರಿಗಳು ಜನಪ್ರತಿನಿಧಿಗಳ ಗಮನಕ್ಕೆ ತರದೇ ನೇರವಾಗಿ ಅಧಿಕಾರ ಚಲಾಯಿಸಲು ಯಾವುದೇ ಅವಕಾಶವಿಲ್ಲ. ಅಧಿಕಾರಿಗಳು ಬೇಜವಾಬ್ದಾರಿಯಿಂದ ನಡೆದುಕೊಳ್ಳಬಾರದು. ಇಂತಹ ಘಟನೆಗಳು ಮರುಕಳಿಸಿದರೆ ಸಂಬಂಧಪಟ್ಟ ಅಧಿಕಾರಿಯ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲೆಯಲ್ಲಿ ಜೇನು ಕೃಷಿಗೆ ಉತ್ತಮ ಅವಕಾಶಗಳಿದ್ದು, ಜೇನು ಅತೀ ಹೆಚ್ಚು ಗೂಡು ಕಟ್ಟುವಂತ ಮರಗಳನ್ನು ಪಟ್ಟಿ ಮಾಡಿ ವರದಿ ನೀಡುವಂತೆ ತೋಟಗಾರಿಕೆ ಇಲಾಖೆಗೆ ಈ ಹಿಂದಿನ ಸಭೆಯಲ್ಲಿ ಸೂಚಿಸಲಾಗಿತ್ತು. ಅದರಂತೆ ಇಲಾಖೆ ಅಧಿಕಾರಿಗಳು ಜೇನು ಕೃಷಿಗೆ ಪೂರಕವಾಗುವಂತ ಸುಮಾರು 10 ತಳಿಯ ಮರಗಳ ಪಟ್ಟಿಯನ್ನು ಮಾಡಿದ್ದು, ಮುಂಬರುವ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈ ಮರಗಳ ಸಸಿಗಳನ್ನು ಬೆಳೆಸಿ ಅರಣ್ಯ ಪ್ರದೇಶದಲ್ಲಿ ಅವುಗಳನ್ನು ನೆಡುವಂತ ಕಾರ್ಯವಾಗಬೇಕು. ಇದರಿಂದ ಪರಿಸರ ವೃದ್ಧಿ ಜೊತೆಗೆ ಜೇನು ಕೃಷಿಕರಿಗೆ ಸಹಕಾರಿಯಾಗಲಿದೆ ಎಂದರು.
ಕೃಷಿ,ಆರೋಗ್ಯ,ಶಿಕ್ಷಣ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ,ಸ್ವಚ್ಛ ಭಾರತ್ ಅಭಿಯಾನ್,ನರೇಗಾ, ಕುಡಿಯುವ ನೀರು,ಅಕ್ಷರ ದಾಸೋಹ ಸೇರಿದಂತೆ ವಿವಿಧ 21ಕ್ಕೂ ಅಧಿಕ ಇಲಾಖೆಗಳ ಪ್ರಗತಿ ಪರಿಶೀಲನೆಯನ್ನು ಸಂಸದರು ಈ ಸಂದರ್ಭದಲ್ಲಿ ನಡೆಸಿದರು.
ಇದೇ ಸಂದರ್ಭದಲ್ಲಿ ಪ್ಲಾಸ್ಟಿಕ್ ಬ್ಯಾಗ್ ಬಳಕೆ ನಿಷೇಧ ದಿನಾಚರಣೆ ನಿಮಿತ್ತ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹೊರತಂದ ಸ್ವಚ್ಛ ಸಂಕೀರ್ಣ ಕೈಪಿಡಿ, ಕರ್ನಾಟಕ ಗ್ರಾಮೀಣ ಘನ ಮತ್ತು ದ್ರವ ತ್ಯಾಜ್ಯ ಉಪ ವಿಧಿಯ ಪರಿಹಾರ ಹೆಲ್ಪ್ ಲೈನ್ ನಂಬರ್,ವಿಶ್ವ ಜನಸಂಖ್ಯಾ ದಿನಾಚರಣೆ ನಿಮಿತ್ತ ‘ಜನಸಂಖ್ಯಾ ಸ್ಥಿರತೆ ನಿಮ್ಮಿಂದ ಮಾತ್ರ ಸಾಧ್ಯ’ಎಂಬ ಕರಪತ್ರವನ್ನು ಸಂಸದರು ಬಿಡುಗಡೆ ಮಾಡಿದರು.
