ದಲಿತರ ಜಮೀನಿಗೆ ಅಕ್ರಮ ಪ್ರವೇಶ; ದೂರು ನೀಡಿದರೂ ಕ್ರಮ ಕೈಗೊಳ್ಳದ ಪೋಲಿಸರ ವಿರುದ್ಧ ಪ್ರತಿಭಟನೆ

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಕುಂದಾಣ ಹೋಬಳಿಯ ಲಿಂಗಧೀರಗೊಲ್ಲಳ್ಳಿಯಲ್ಲಿ ಮುನಿರಾಯಪ್ಪ ಎಂಬವರ ಮೂರು ಎಕರೆ ಜಮೀನಿಗೆ, ಬೆಂಗಳೂರಿನ ಕೊಡಿಗೆಹಳ್ಳಿ ನಿವಾಸಿಗಳು ಅಕ್ರಮವಾಗಿ ಪ್ರವೇಶ ಮಾಡಿ ಜಮೀನನ್ನು ಕಬಳಿಸಲು ಯತ್ನಿಸಿರುವ ಬಗ್ಗೆ ವಿಶ್ವನಾಥಪುರ ಪೋಲಿಸ್ ಠಾಣೆಗೆ ಕಳೆದ ವಾರ ದೂರು ನೀಡಿದರೂ ಕ್ರಮ ಕೈಗೊಳ್ಳಲು ವಿಳಂಬ ಮಾಡಿದ್ದಾರೆ ಎಂದು ಆರೋಪಿಸಿ ಪ್ರಜಾ ವಿಮೋಚನಾ ಚಳವಳಿಯ ನೇತೃತ್ವದಲ್ಲಿ ರೈತ ಮುನಿರಾಯಪ್ಪ ಅವರ ಕುಟುಂಬದ ಸದಸ್ಯರು ವಿಶ್ವನಾಥಪುರ ಪೋಲಿಸರ ವಿರುದ್ಧ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ಈ ಬಗ್ಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಬೆಂಗಳೂರು ಗ್ರಾಮಾಂತರ ಅಪರ ಜಿಲ್ಲಾಧಿಕಾರಿ ಜಗದೀಶ್ ಕೆ ನಾಯಕ್ ಅವರಿಗೆ ಮನವಿ ಪತ್ರ ನೀಡಿದರು.
ಬೆಂಗಳೂರಿನ ಕೊಡಿಗೆಹಳ್ಳಿ ನಿವಾಸಿಗಳಾದ ಶ್ರೀನಿವಾಸಗೌಡ, ಅಲಿಯಾಸ್ ಶ್ರೀನಿವಾಸರೆಡ್ಡಿ ಯೋಗೇಶ್, ಚಂದ್ರಶೇಖರ್, ಎಂಬ ಭೂ-ಮಾಫಿಯಾಗಳ ಪರವಾಗಿ ಲಿಂಗಧೀರಗೊಲ್ಲಳ್ಳಿಯ ಗ್ರಾಮದವರಾದ ಬಸವರಾಜ್ ಬಿನ್ ನಾಗಭೂಷಣ, ಸೂಲಕುಂಟೆ ಸುಬ್ರಮಣಿ, ನಾಡ ಕಛೇರಿಯ ಗ್ರಾಮ ಸೇವಕ ಶ್ರೀನಿವಾಸ್ ಬಿನ್ ಮುನಿಯಪ್ಪ, ರಘು ಬಿನ್ ವೆಂಕಟೇಶ್, ಮುಂಜುನಾಥ ಬಿನ್ ವೆಂಕಟೇಶ, ಬಾಲರಾಜ್ ಬಿನ್ ಕೋಡೆಪ್ಪ, ಮತ್ತು ನಾಗಭೂಷಣ ಎಂಬ ಭೂ-ದಳ್ಳಾಳಿಗಳು, ದಲಿತ ಕುಟುಂಬಕ್ಕೆ ಸೇರಿದ ಜಮೀನನ್ನು ಕಬಳಿಸಲು ಪೋಲಿಸರು ಮತ್ತು ಅಧಿಕಾರಿಗಳೊಂದಿಗೆ ಶಾಮಿಲಾಗಿ ಷಡ್ಯಂತ್ರ ನಡೆಸಿದ್ದಾರೆ ಎಂದು ಪ್ರಜಾ ವಿಮೋಚನಾ ಚಳುವಳಿಯ ಮುಖಂಡರು ಆರೋಪಿಸಿದ್ದಾರೆ.
ಮುನಿರಾಯಪ್ಪ ಕುಟುಂಬ 1963ರಿಂದ ಈ ಜಮೀನಿನಲ್ಲಿ ರಾಗಿ, ಅವರೆ, ಜೋಳ, ಹುರುಳಿ, ಮುಂತಾದ ಬೆಳೆಗಳನ್ನು ಬೆಳೆದುಕೊಂಡು ಬದುಕು ಸಾಗಿಸಿಕೊಂಡು ಬರುತಿದ್ದು, ಈಗ ಭೂ ಮಾಫಿಯಾಗಳು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಜಮೀನನ್ನು ಅಕ್ರಮವಾಗಿ ಕಬಳಿಸಲು ಯತ್ನಿಸುತ್ತಿದ್ದಾರೆ ಎಂದು ರೈತ ಮುನಿರಾಯಪ್ಪನವರ ಕುಟುಂಬ ಆರೋಪಿಸಿದೆ.
ಪ್ರತಿಭಟನೆಯಲ್ಲಿ ಹಿರಿಯ ವಕೀಲರಾದ ಸಿದ್ದಾರ್ಥ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕಾರಹಳ್ಳಿ ಶ್ರೀನಿವಾಸ್ ಪ್ರಜಾ ವಿಮೋಚನ ಚಳುವಳಿ ರಾಜ್ಯಾಧ್ಯಕ್ಷ ಮುನಿಆಂಜಿನಪ್ಪ, ಗೋವಿಂದ್ ರಾಜ್, ವಕೀಲರಾದ ಮಹೇಶ್ ದಾಸ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಕೆವಿ.ಸ್ವಾಮಿ, ಕೆಂಪಣ್ಣ ದಲಿತ ಯುವ ಮುಖಂಡ ಲೋಕೇಶ್ ಸೇರಿದಂತೆ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಇದ್ದರು.




