2ನೇ ಅವಧಿಗೆ ಗುಜರಾತ್ ಸಿಎಂ ಪಟ್ಟಕ್ಕೆ ಭೂಪೇಂದ್ರ ಪಟೇಲ್ ಆಯ್ಕೆ : ಡಿ.12ಕ್ಕೆ ಪ್ರಮಾಣ ವಚನ ಸ್ವೀಕಾರ

ನವದೆಹಲಿ: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದ ಬೆನ್ನಲ್ಲೇ, ಎರಡನೇ ಅವಧಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಭೂಪೇಂದ್ರ ಭಾಯಿ ಪಟೇಲ್ ಆಯ್ಕೆಯಾಗಿದ್ದಾರೆ. ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಇಂದು ಹೊಸದಾಗಿ ಚುನಾಯಿತರಾದ ಬಿಜೆಪಿ ಶಾಸಕರು ಗಾಂಧಿನಗರ ಪಕ್ಷದ ಕಚೇರಿಯಲ್ಲಿ ಸಭೆ ಹಮ್ಮಿಕೊಂಡಿದ್ದರು. ಇದರಲ್ಲಿ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಉಪಸ್ಥಿತರಿದ್ದರು.
ಪಟೇಲ್ ಅವರು ಶುಕ್ರವಾರ ರಾಜ್ ಬಹ್ವಾನ್‌ನಲ್ಲಿ ರಾಜ್ಯಪಾಲರಿಗೆ ರಾಜೀನಾಮೆ ನೀಡಿದ್ದರು. ಈ ವೇಳೆ ಬಿಜೆಪಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿತ್ತು.
ಮೂಲಗಳ ಪ್ರಕಾರ, ಹೊಸ ಗುಜರಾತ್ ಹೊಸ ಸಚಿವ ಸಂಪುಟ ಡಿಸೆಂಬರ್ 12 ರಂದು ಮುಖ್ಯಮಂತ್ರಿಯೊಂದಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದು, ಇದರಲ್ಲಿ 12ಕ್ಕೂ ಹೆಚ್ಚು ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಕೈಗೆತ್ತಿಕೊಳ್ಳುವ ಕುರಿತು ಕೇಳಿದ ಪ್ರಶ್ನೆಗೆ ಪಟೇಲ್, ಸಮಿತಿಯನ್ನು ರಚಿಸಲಾಗಿದ್ದು, ಅವರ ಶಿಫಾರಸಿನ ಆಧಾರದ ಮೇಲೆ ಕೆಲಸ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
