ಅತಿ ಹೆಚ್ಚು ಸಂಖ್ಯೆಯಲ್ಲಿ ಮತ ಚಲಾಯಿಸಲು ಜನತೆಗೆ ಪ್ರಧಾನಿ ಮನವಿ

ನವದೆಹಲಿ: ಗುಜರಾತ್ ವಿಧಾನಸಭಾ ಚುನಾವಣೆಯ 2ನೇ ಹಂತದ ಮತದಾನ ಈಗಾಗಲೇ ಪ್ರಾರಂಭವಾಗಿದೆ.
ಇದರ ಜೊತೆಗೆ ದೇಶಾದ್ಯಂತ ಹಲವೆಡೆ ಉಪಚುನಾವಣೆಗಳು ಕೂಡ ನಡೆಯುತ್ತಿವೆ. ಈ ಚುನಾವಣೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಪ್ರಧಾನಿ ನರೇಂದ್ರ ಮೋದಿ ಜನರಿಗೆ ಮನವಿ ಮಾಡಿದ್ದಾರೆ. ಪ್ರಧಾನಿ ಮೋದಿ ಈಗಾಗಲೇ ಅಹಮದಾಬಾದ್ನ ರಾನಿಪ್ ಪ್ರದೇಶದ ಪ್ರೌಢಶಾಲೆಯಲ್ಲಿ ಸ್ಥಾಪಿಸಲಾದ ಮತದಾನ ಕೇಂದ್ರದಲ್ಲಿ ಮತ ಚಲಾಯಿಸಿದ್ದಾರೆ.
ಮೋದಿ ಅವರ ತವರು ರಾಜ್ಯವಾದ ಗುಜರಾತ್ನಲ್ಲಿ ಇಂದು 2ನೇ ಮತ್ತು ಅಂತಿಮ ಹಂತದ ಚುನಾವಣೆ ನಡೆಯುತ್ತಿದೆ. ಮಧ್ಯ ಮತ್ತು ಉತ್ತರ ಗುಜರಾತ್ ಜಿಲ್ಲೆಗಳಲ್ಲಿ ಹರಡಿರುವ 93 ಸ್ಥಾನಗಳಿಗೆ ಇಂದು ಮತದಾನ ಆರಂಭವಾಗಿದೆ. 800ಕ್ಕೂ ಹೆಚ್ಚು ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಗುಜರಾತ್ ಚುನಾವಣೆಯ 2ನೇ ಹಂತದಲ್ಲಿ ಮತ ಚಲಾಯಿಸುತ್ತಿರುವ ಎಲ್ಲರಿಗೂ, ವಿಶೇಷವಾಗಿ ಯುವ ಮತದಾರರು ಮತ್ತು ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಮನವಿ ಮಾಡುತ್ತಿದ್ದೇನೆ. ನಾನು ಸುಮಾರು 9 ಗಂಟೆಗೆ ಅಹಮದಾಬಾದ್‌ನಲ್ಲಿ ನನ್ನ ಮತ ಚಲಾಯಿಸಲಿದ್ದೇನೆ ಎಂದು ಪ್ರಧಾನಿ ಮೋದಿ ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದರು.
