‘ಹೆಡ್ ಬುಷ್’ ವೀರಗಾಸೆ ವಿವಾದ: ‘ಸಂವಾದಕ್ಕೂ ಸಿದ್ಧ.. ಜಗಳಕ್ಕೂ ಸಿದ್ಧ’ವೆಂದು ಕಿಡಿಕಾರಿದ ಅಗ್ನಿ ಶ್ರೀಧರ್!

ಧನಂಜಯ್ ನಟಿಸಿ, ನಿರ್ದೇಶಿಸಿರೋ ‘ಹೆಡ್ ಬುಷ್’ ಸಿನಿಮಾ ರಿಲೀಸ್ ಆಗಿದೆ. ಸಿನಿಮಾಗೆ ಬಾಕ್ಸಾಫೀಸ್ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಇದರ ಹಿಂದೆನೇ ‘ಹೆಡ್ ಬುಷ್’ ಸಿನಿಮಾ ವಿವಾದಕ್ಕೂ ಸಿಕ್ಕಿಕೊಂಡಿದೆ. ವೀರಗಾಸೆ ಹಾಗೂ ಕರಗ ಬಗ್ಗೆ ಸಿನಿಮಾದಲ್ಲಿ ಅವಹೇಳಕಾರಿಯಾಗಿ ತೋರಿಸಲಾಗಿದೆ ಎಂದು ಆರೋಪ ಮಾಡಲಾಗುತ್ತಿದೆ.
ಐತಿಹಾಸಿ ಸುಪ್ರಸಿದ್ಧ ವೀರಗಾಸೆ ಹಾಗೂ ಕರಗ ಆಚರಣೆಗೆ ಸಿನಿಮಾದಲ್ಲಿ ಅಪಮಾನ ಮಾಡಲಾಗಿದೆ ಎನ್ನುವ ಆರೋಪ ಮಾಡಲಾಗಿದೆ. ಈ ಸಂಬಂಧ ‘ಹೆಡ್ ಬುಷ್’ ಚಿತ್ರದ ವಿರುದ್ಧ ಫಿಲ್ಮ್ ಚೇಂಬರ್‌ಗೆ ದೂರು ನೀಡಲು ವಹ್ನಿಕುಲ ಕ್ಷತ್ರಿಯ ಹಾಗೂ ತಿಗಳ ಸಮುದಾಯದ ಮುಖಂಡರು ಮುಂದಾಗಿದ್ದಾರೆ.
ತೀವ್ರ ಆರೋಪ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಲೇಖಕ ಅಗ್ನಿ ಶ್ರೀಧರ್ ಆಕ್ರೋಶ ಹೊರಹಾಕಿದ್ದಾರೆ. ಇದರ ಜೊತೆಗೆನೇ ‘ಹೆಡ್ ಬುಷ್’ ಸಿನಿಮಾದಲ್ಲಿ ಕರಗವನ್ನು ‘ದುಜುಬಿ’ ಅಂತ ಹೇಳಿದ್ದು ಯಾಕೆ ಅನ್ನೋದನ್ನೂ ಹೇಳಿದ್ದಾರೆ. ಅಲ್ಲದೆ, ಕೆಣಕುವವರ ಜೊತೆ ಸಂವಾದಕ್ಕೂ ಸಿದ್ಧ, ಜಗಳಕ್ಕೂ ಸಿದ್ಧ ಅಂತ ಕಿಡಿಕಾರಿದ್ದಾರೆ.
ಸಂವಾದಕ್ಕೂ ಸಿದ್ಧ-ಜಗಳಕ್ಕೂ ಸಿದ್ಧ!
ವಿವಾದ ತಾರಕ್ಕೇರುತ್ತಿದ್ದಂತೆ ಅಗ್ನಿ ಶ್ರೀಧರ್ ಮಾಧ್ಯಮಗಳ ಜೊತೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಫಸ್ಟ್ ನ್ಯೂಸ್ ಜೊತೆ ಮಾತಾಡಿರೋ ಅಗ್ನಿ ಶ್ರೀಧರ್ ಕೆಣಕುವವರ ವಿರುದ್ಧ ಸಂವಾದಕ್ಕೂ ಸಿದ್ಧ.. ಜಗಳಕ್ಕೂ ಸಿದ್ದ ಎಂದಿದ್ದಾರೆ. “ಯಶಸ್ಸಿನ ಹಿಂದೆ ವಿವಾದ ಇದ್ದೇ ಇರುತ್ತೆ. ಸಿನಿಮಾ ಯಶಸ್ಸು ಅಂತೂ ಆಗಿದೆ. ಆದಾಗ ಕೆಲವರು ವಿವಾದ ಸೃಷ್ಟಿ ಮಾಡುತ್ತಾರೆ.
ನಿಜವಾಗಿಯೂ ಹೃದಯದಿಂದ ಬಂದಿರೋದಕ್ಕೆ ಸ್ಪಷ್ಟನೆ ಕೊಡುವುದಕ್ಕೆ ಸಿದ್ಧವಾಗಿದ್ದೇವೆ. ಯಾಕಂದ್ರೆ, ಕ್ರಿಯೇಟರ್ ನಾನು. ಬರೀ ಧನಂಜಯ ಎಲ್ಲಾ ಮಾತಾಡುವುದಕ್ಕೆ ಆಗುವುದಿಲ್ಲ. ಈ ಜವಾಬ್ದಾರಿಯನ್ನು ನಾನೇ ಹೊತ್ತುಹೊಳ್ಳುತ್ತೇನೆ. ಆದರೆ, ಬೇಕಂತ ಕೆಣಕುವುದಕ್ಕೆ ಬರುತ್ತಿದ್ದಾರಲ್ಲ. ಅವರೊಂದಿಗೆ ಎಲ್ಲದಕ್ಕೂ ಸಿದ್ಧವಾಗಿದ್ದೇನೆ. ಸಂವಾದಕ್ಕೂ ಸಿದ್ಧವಾಗಿದ್ದೇನೆ. ಜಗಳಕ್ಕೂ ಸಿದ್ಧವಾಗಿದ್ದೇನೆ. ” ಎಂದು ಅಗ್ನಿ ಶ್ರೀಧರ್ ಆಕ್ರೋಶ ಹೊರಹಾಕಿದ್ದಾರೆ.
