ತಮ್ಮ ಅಳಿಯ ಪ್ರಧಾನಿಯಾಗಿದ್ದಕ್ಕೆ ಇನ್ಫೋಸಿಸ್ ನಾರಾಯಣಮೂರ್ತಿ ಸಂತಸ

ನವದೆಹಲಿ : ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರು ತಮ್ಮ ಅಳಿಯ ರಿಷಿ ಸುನಕ್ ಬ್ರಿಟನ್‌ನ ಪ್ರಧಾನಿಯಾ ಗುತ್ತಿರುವ ಬಗ್ಗೆ ಸಂತಸ ವ್ಯಕ್ತ ಪಡಿಸಿದ್ದಾರೆ. ರಷಿ “ಅವರ ಬಗ್ಗೆ ನನಗೆ ಹೆಮ್ಮೆ ಇದೆ” ಎಂದು ಹೇಳಿದ್ದಾರೆ. ತಮ್ಮ ಮಗಳು ಅಕ್ಷತಾ ಮೂರ್ತಿಯನ್ನು ಮದುವೆಯಾಗಿರುವ ರಿಷಿ ಯುನೈಟೆಡ್ ಕಿಂಗ್‌ಡಂನ ಜನರಿಗೆ ತಮ್ಮ ಕೈಲಾದದ್ದನ್ನು ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಭಾರತೀಯ ಬಿಲಿಯನೇರ್ ಹೇಳಿದ್ದಾರೆ.
ರಿಷಿ ಸುನಕ್ ಅವರು ಸೋಮವಾರ ಕನ್ಸರ್ವೇಟಿವ್ ಪಕ್ಷವನ್ನು ಮುನ್ನಡೆಸುವ ಸ್ಪರ್ಧೆಯಲ್ಲಿ ಗೆದ್ದ ನಂತರ ಯುಕೆಯ ಮೊದಲ ಭಾರತೀಯ ಮೂಲದ ಪ್ರಧಾನಿಯಾಗಿದ್ದಾರೆ. ವೆಸ್ಟ್‌ಮಿನಿಸ್ಟರ್‌ನ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರಾದ 42 ವರ್ಷ ವಯಸ್ಸಿನ ರಿಷಿ ಆಧುನಿಕ ಕಾಲದಲ್ಲಿ ದೇಶದ ಅತ್ಯಂತ ಕಿರಿಯ ನಾಯಕರಾಗಿದ್ದಾರೆ ಅಕ್ಟೋಬರ್ 20 ರಂದು ಯುನೈಟೆಡ್ ಕಿಂಗ್‌ಡಂನ ಪಿಎಂ ಸ್ಥಾನದಿಂದ ಕೆಳಗಿಳಿದ ಲಿಜ್ ಟ್ರಸ್ ಅವರಿಂದ ಸುನಕ್ ಅಧಿಕಾರ ವಹಿಸಿಕೊಂಡಿದ್ದಾರೆ.
ರಿಷಿ ಸುನಕ್ ಅವರು ಭಾರತೀಯ ಮೂಲದ ವೈದ್ಯರಾದ ತಂದೆ ಯಶ್ವೀರ್ ಮತ್ತು ಫಾರ್ಮಾಸಿಸ್ಟ್ ತಾಯಿ ಉಷಾ ಅವರ ಯುಕೆ-ಸಂಜಾತ ಪುತ್ರರಾಗಿದ್ದಾರೆ. ಅವರ ಕುಟುಂಬವು 1960 ರ ದಶಕದಲ್ಲಿ ಪೂರ್ವ ಆಫ್ರಿಕಾದಿಂದ ಬ್ರಿಟನ್‌ಗೆ ವಲಸೆ ಬಂದು ನೆಲಸಿದೆ. ಸುನಕ್ ಅವರ ರಾಜಕೀಯ ಜೀವನವು 2015 ರಲ್ಲಿ ಯಾರ್ಕ್‌ಷೈರ್‌ನಲ್ಲಿ ರಿಚ್‌ಮಂಡ್‌ನ ಸುರಕ್ಷಿತ ಟೋರಿ ಸ್ಥಾನವನ್ನು ಗೆಲ್ಲುವುದರೊಂದಿಗೆ ಆರಂಭವಾಯಿತು.
