ಮಹಾರಾಷ್ಟ್ರದಲ್ಲಿರುವುದು ಉತ್ಸವ ಪ್ರಿಯ ಸರ್ಕಾರ: ಉದ್ಧವ್

ಮುಂಬೈ: ಏಕನಾಥ ಶಿಂದೆ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿರುವ ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಅವರು ಸರ್ಕಾರವನ್ನು ‘ಉತ್ಸವ ಪ್ರಿಯ ಸರ್ಕಾರ’ ಎಂದು ಕರೆದಿದ್ದಾರೆ ಮತ್ತು ಜನ ಸಾಮಾನ್ಯರ ಸಂಕಷ್ಟಗಳನ್ನು ಸರ್ಕಾರವು ಕಡೆಗಣಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಮಳೆ ಮತ್ತು ಪ್ರವಾಹದಿಂದ ತತ್ತರಿಸಿರುವ ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡಿರುವ ಉದ್ಧವ್ ಅವರು ಔರಂಗಬಾದ್ನಲ್ಲಿ ಹೀಗೆ ಹೇಳಿದರು. ‘ಉತ್ಸವಗಳನ್ನು ನಡೆಸುವ ಅಗತ್ಯವಿದೆ. ಆದರೆ ಇದು ಸಂಪೂರ್ಣವಾಗಿ ಉತ್ಸವ ಪ್ರಿಯ ಸರ್ಕಾರವಾಗಿದೆ. ಕೇವಲ ಉತ್ಸವಗಳನ್ನು ಪ್ರೀತಿಸಿ, ಜನ ಸಾಮಾನ್ಯರ ಸಮಸ್ಯೆಗಳನ್ನು ಸರ್ಕಾರವು ಕಡೆಗಣಿಸಬಾರದು. ಶಿವಸೇನಾವನ್ನು ವಂಚಿಸಿದ್ದು ಪರವಾಗಿಲ್ಲ ಆದರೆ ಜನರನ್ನು ವಂಚಿಸಬಾರದು’ ಎಂದು ಹೇಳಿದರು.
ಮಹಾ ವಿಕಾಸ ಅಘಾಡಿ ಸರ್ಕಾರ ಪತನವಾದ ಬಳಿಕ ಇದೇ ಮೊದಲ ಬಾರಿಗೆ ಉದ್ಧವ್ ಅವರು ಮುಂಬೈ ಹೊರಗೆ ಪ್ರವಾಸ ಕೈಗೊಂಡಿದ್ದಾರೆ.
ಅಧಿಕ ಮಳೆಯಿಂದ ಹಾನಿಗೀಡಾಗಿರುವ ಪ್ರದೇಶಗಳನ್ನು ಅತಿವೃಷ್ಟಿ ಪ್ರದೇಶಗಳು ಘೋಷಿಸಿ, ಕೂಡಲೇ ಹೆಕ್ಟೇರ್ಗೆ ₹ 50,000 ಪರಿಹಾರ ನೀಡುವಂತೆ ಉದ್ಧವ್ ಸರ್ಕಾರವನ್ನು ಆಗ್ರಹಿಸಿದರು. ಆತ್ಮಹತ್ಯೆ ಮಾಡಿಕೊಳ್ಳುವ ಕುರಿತು ಯೋಚಿಸಬೇಡಿ. ಎಲ್ಲರೂ ಒಟ್ಟಾಗಿ ಹೋರಾಡೋಣ ಎಂದು ರೈತರಿಗೆ ಅವರು ಕರೆ ನೀಡಿದರು.
