ಪಿಎಸ್ಐ ಪರೀಕ್ಷೆ ನೇಮಕಾತಿ ರದ್ದು: ಶೀಘ್ರವೇ ಮರು ಪರೀಕ್ಷೆ-ಆರಗ ಜ್ಞಾನೇಂದ್ರ

ಬೆಂಗಳೂರು: 545 PSI ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗಿದ್ದು ಆ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಕಾರಣ ರದ್ದುಪಡಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅವರು, ‘ಆರೋಪಿಗಳನ್ನು ಹೊರತುಪಡಿಸಿ, ಉಳಿದವರಿಗೆ ಶೀಘ್ರವೇ ಮರು ಪರೀಕ್ಷೆ ನಡೆಯಲಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಪ್ರಮುಖ ಆರೋಪಿ ದಿವ್ಯಾ ಹಾಗರಗಿಯನ್ನು ಪುಣೆಯಲ್ಲಿ ಬಂಧಿಸಿ ಕಲಬುರಗಿಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. ಇದಲ್ಲದೆ ಇನ್ನಿತರ ಆರೋಪಿಗಳಾದ ಅರ್ಚನಾ, ದಿವ್ಯಾ, ಚಾಲಕ ಸದ್ದಾಂ, ಸುನಂದಾರನ್ನು ಪುಣೆಯಲ್ಲಿ ವಶಕ್ಕೆ ಪಡೆಯಲಾಗಿದೆ.
ಕೇವಲ ಕಲಬುರಗಿ ಮಾತ್ರವಲ್ಲ, ಅನೇಕ ಸೆಂಟರ್ ಗಳಲ್ಲಿ ಪರೀಕ್ಷೆ ಅಕ್ರಮವಾಗಿ ನಡೆದಿರುವ ಕಾರಣ ರಾಜ್ಯ ಸರ್ಕಾರವು ಇಡೀ ಪರೀಕ್ಷೆಯನ್ನೇ ರದ್ದುಪಡಿಸಿದೆ ಎಂದು ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಒಟ್ಟು 54,289 ಅಭ್ಯರ್ಥಿಗಳು ಪಿಎಸ್ಐ ಪರೀಕ್ಷೆಗೆ ಕುಳಿತಿದ್ದರು. ಅವರಿಗೆ ಇನ್ನೊಮ್ಮೆ ಪರೀಕ್ಷೆಗೆ ಅವಕಾಶ ನೀಡಲಾಗುತ್ತದೆ. ಅಪಾಧಿತರನ್ನು ಹೊರತುಪಡಿಸಿ ಉಳಿದವರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಎಂದು ಗೃಹ ಸಚಿವರು ತಿಳಿಸಿದ್ದಾರೆ
ಶೀಘ್ರವೇ ಮರು ಪರೀಕ್ಷೆ ದಿನಾಂಕ ಪ್ರಕಟ
ಕಷ್ಟಪಟ್ಟು ಓದಿದ ಅಭ್ಯರ್ಥಿಗಳಿಗೆ ಅನ್ಯಾಯವಾಗಲಿದೆ. ಈ ಬಾರಿ ಆಯ್ಕೆಯಾಗಿರುವ ಪ್ರಾಮಾಣಿಕರಿಗೆ ಇದರಿಂದ ದೊಡ್ಡ ಅನ್ಯಾಯ ಆಗುತ್ತದೆ. ಹೀಗಾಗಿಯೇ ಶೀಘ್ರವೇ ಮರು ಪರೀಕ್ಷೆಯನ್ನು ನಡೆಸಲಾಗುತ್ತದೆ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.
