
ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡ ಉತ್ತಮ ಮೊತ್ತ ಕಲೆಹಾಕಿತು. ಅದಕ್ಕೆ ಕಾರಣವಾಗಿದ್ದು, ಕೆಎಲ್ ರಾಹುಲ್ (103*ರನ್, 62 ಎಸೆತ, 12 ಬೌಂಡರಿ, 4 ಸಿಕ್ಸರ್) ಬಾರಿಸಿದ ಆಕರ್ಷಕ ಶತಕ. 169 ರನ್ ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ 8 ವಿಕೆಟ್ ಗೆ 132 ರನ್ ಕಲೆಹಾಕಿ ಸೋಲು ಕಂಡಿತು. ಆ ಮೂಲಕ ಐಪಿಎಲ್ ನಿಂದ ಬಹುತೇಕವಾಗಿ ಹೊರಬಿದ್ದಿದೆ.
ಸಾಲು ಸಾಲು ಸೋಲುಗಳಿಂದ ಆಘಾತ ಕಂಡಿದ್ದ ಮುಂಬೈ ಇಂಡಿಯನ್ಸ್ ತಂಡಕ್ಕೆ ಕಳೆದ ಕೆಲ ಪಂದ್ಯಗಳಿಗೆ ಹೋಲಿಸಿದರೆ, ಈ ಬಾರಿ ಉತ್ತಮ ಆರಂಭ ಸಿಕ್ಕಿತು. ಮೊದಲ ವಿಕಟ್ ಗೆ ರೋಹಿತ್ ಶರ್ಮ ಹಾಗೂ ಇಶಾನ್ ಕಿಶನ್ ಜೋಡಿ 43 ಎಸೆತಗಳಲ್ಲಿ 49 ರನ್ ಜೊತೆಯಾಟವಾಡಿತು. ಆಮೆಗತಿಯ ಬ್ಯಾಟಿಂಗ್ ನಡೆಸಿದ ಇಶಾನ್ ಕಿಶನ್ 20 ಎಸೆತಗಳನ್ನು ಎದುರಿಸಿ ಕೇವಲ 8 ರನ್ ಬಾರಿಸಿದರೆ, ಜೊತೆಯಾಟ ಹೆಚ್ಚಿನ ರನ್ ಗಳನ್ನು ರೋಹಿತ್ ಶರ್ಮ ಸಿಡಿಸಿದ್ದರು. ತಿಣುಕುತ್ತ ಬ್ಯಾಟಿಂಗ್ ನಡೆಸಿದ್ದ ಇಶಾನ್ ಕಿಶನ್, ರವಿ ಬಿಷ್ಣೋಯಇ ಎಸೆದ 8ನೇ ಓವರ್ ನ ಮೊದಲ ಎಸೆತದಲ್ಲಿ ನಿರ್ಗಮಿಸಿದರು.
ಇಶಾನ್ ಕಿಶನ್ ಔಟಾದ ಬೆನ್ನಲ್ಲಿಯೇ ಮುಂಬೈನ ಪ್ರಮುಖ ಬ್ಯಾಟ್ಸ್ ಮನ್ ಗಳು ಪರೇಡ್ ನಡೆಸಿದರು. 5 ಎಸೆತ ಆಡಿದ ಡೆವಾಲ್ಡ್ ಬ್ರೇವಿಸ್ 3 ರನ್ ಬಾರಿಸಿ ಮೊಹ್ಸಿನ್ ಖಾನ್ ಗೆ ವಿಕೆಟ್ ನೀಡಿದರೆ, 31 ಎಸೆತಗಳಲ್ಲಿ5 ಬೌಂಡರಿ, 1 ಸಿಕ್ಸರ್ ನೊಂದಿಗೆ 39 ರನ್ ಸಿಡಿಸಿ ಮುಂಬೈನ ಆರಂಭಿಕ ರನ್ ಗಳಿಗೆ ಕಾರಣರಾಗಿದ್ದ ರೋಹಿತ್ ಶರ್ಮ 3ನೇ ವಿಕೆಟ್ ರೂಪದಲ್ಲಿ ನಿರ್ಗಮಿಸಿದರು. ಕೃನಾಲ್ ಪಾಂಡ್ಯ, ರೋಹಿತ್ ಅವರ ಪ್ರಮುಖ ವಿಕೆಟ್ ಉರುಳಿಸಿದರು. ಕಳೆದ ಹಲವು ಪಂದ್ಯಗಳಿಂದ ಮುಂಬೈ ತಂಡಕ್ಕೆ ಬ್ಯಾಟಿಂಗ್ ವಿಭಾಗದ ಬಲವಾಗಿದ್ದ ಸೂರ್ಯ ಕುಮಾರ್ ಯಾದವ್, 7 ಎಸೆತಗಳಲ್ಲಿ 7 ರನ್ ಬಾರಿಸಿ ಆಯುಷ್ ಬಡೋನಿಗೆ ವಿಕೆಟ್ ನೀಡಿದರು. ಇದು ಬಡೋನಿಯ ಮೊಟ್ಟಮೊದಲ ಐಪಿಎಲ್ ವಿಕೆಟ್ ಎನಿಸಿದೆ. ಒಂದು ಹಂತದಲ್ಲಿ ವಿಕೆಟ್ ನಷ್ಟವಿಲ್ಲದೆ 49 ರನ್ ಬಾರಿಸಿದ್ದ ಮುಂಬೈ ಇಂಡಿಯನ್ಸ್ 67 ರನ್ ಗಳಿಸುವ ವೇಳೆಗೆ 4 ವಿಕೆಟ್ ಕಳೆದುಕೊಂಡು ಸೋಲಿನ ಹಾದಿಯಲ್ಲಿತ್ತು.



