ಪಿಎಸ್ಐ ಪರೀಕ್ಷೆ ಅಕ್ರಮ: ಮುನ್ನಾಬಾಯ್ ಸ್ಟೈಲ್ಲ್ಲಿ ಪರೀಕ್ಷೆ ಬರೆದ ಗನ್ಮ್ಯಾನ್

ಕಲಬುರಗಿ: ಪಿಎಸ್ಐ ಪರೀಕ್ಷೆ ಅಕ್ರಮದಲ್ಲಿ ಹೊಸದೊಂದು ಕುತೂಹಲಕಾರಿ ಅಂಶ ಬೆಳಕಿಗೆ ಬಂದಿದೆ. ಸಿಐಡಿ ಪೊಲೀಸರು ಬಂಧಿಸಿದ ಅಫಜಲಪುರ ಶಾಸಕರ ಗನ್ಮ್ಯಾನ್ ಹಯ್ಯಾಳ ದೇಸಾಯಿ, ಪಕ್ಕಾ ಮುನ್ನಾಬಾಯಿ ಎಂಬಿಬಿಎಸ್ ಚಿತ್ರದ ಮಾದರಿಯಲ್ಲಿ ಪರೀಕ್ಷೆ ಬರೆದಿದ್ದ ಅನ್ನೋ ಇಂಟರೆಸ್ಟಿಂಗ್ ಸಂಗತಿ ಹೊರಬಿದ್ದಿದೆ.
ಹೌದು ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣ ಬಗೆದಷ್ಟು ಹೊಸತನ ಬಿಚ್ಚಿಡುತ್ತಿದೆ. ಓಎಮ್ಆರ್ ಶೀಟಿನಲ್ಲಿ ಅಕ್ರಮವೆಸಗಿ ಆಯ್ಕೆಯಾದ ತಂಡದ ಬೇಟೆಯಾಡುತ್ತಿರುವ ಸಿಐಡಿ ತಂಡಕ್ಕೆ ಮತ್ತೊಂದು ರೀತಿಯಿಂದ ಅಕ್ರಮ ಪರೀಕ್ಷೆ ಬರೆದ ಗ್ಯಾಂಗ್ ಪತ್ತೆ ಮಾಡಿದ್ದಾರೆ. ಸಂಜಯದತ್ ಅಭಿನಯದ ಮುನ್ನಾಬಾಯಿ ಎಂಬಿಬಿಎಸ್ ಚಿತ್ರದಲ್ಲಿ ಎಂಬಿಬಿಎಸ್ ಪರೀಕ್ಷೆ ಪಾಸ್ ಮಾಡಲು ಸಂಜಯದತ್ ಬ್ಲೂಟೂತ್ ಡಿವೈಸ್ ಬಳಸಿಕೊಂಡಿರ್ತಾರೆ.
ಅದೆ ದಾರಿಯನ್ನು ಹಯ್ಯಾಳ ದೇಸಾಯಿ ಆಯ್ಕೆ ಮಾಡಿಕೊಂಡಿದ್ದ ಅನ್ನೋದು ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈತ ಬ್ಲೂಟೂತ್ ಡಿವೈಸ್ ಬಳಕೆ ಮಾಡಿಕೊಂಡು ಪರೀಕ್ಷಾ ಕೇಂದ್ರದ ಹೊರಗಿನವವರಿಂದ ಉತ್ತರ ಪಡೆದು ಪರೀಕ್ಷೆ ಬರೆದು ಹೆಚ್ಚಿನ ಅಂಕ ಪಡೆದು ಪಿಎಸ್ಐ ಆಯ್ಕೆ ಆಗಿದ್ದಾನಂತೆ, ಇದೇ ರೀತಿ ಅನೇಕರು ಪರೀಕ್ಷೆ ಬರೆದಿರೋ ಶಂಕೆ ಕೂಡಾ ವ್ಯಕ್ತವಾಗಿದೆ.
ಈ ನಿಟ್ಟಿನಲ್ಲಿ ಸಿಐಡಿ ತಂಡ ಶೋಧಕಾರ್ಯ ಆರಂಭಿಸಿದೆ. ಈ ಅಕ್ರಮದಲ್ಲಿ ಕಲಬುರಗಿ ಜಿಲ್ಲೆಯ ಮತ್ತೋರ್ವ ಪ್ರಭಾವಿ ಮುಖಂಡ ಕಿಂಗ್ ಪಿನ್ ಆಗಿದ್ದಾನೆ ಅನ್ನೊ ಮಾಹಿತಿ ಹಯ್ಯಾಳ ದೇಸಾಯಿ ನೀಡಿದ ಮಾಹಿತಿಯಿಂದ ಗೊತ್ತಾಗಿದೆ. ಸಿಕ್ಕಿರುವ ಮಾಹಿತಿ ಮೇರೆಗೆ ಕಿಂಗ್ಪಿನ್ ಪತ್ತೆಗಾಗಿ ಸಿಐಡಿ ಬಲೆ ಬೀಸಿದೆ. ಈಗಾಗಲೇ ಅನೇಕ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನೂರಾರು ಜನರಿಗೆ ನೌಕರಿ ಕೊಡಿಸಿರೋ ಕಿಂಗ್ ಪಿನ್, ಕಲಬುರಗಿ ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ದತೆ ಮಾಡಿಕೊಳ್ಳುತ್ತಿರೋ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈತನ ಬಂಧನಕ್ಕಾಗಿ ಸಿಐಡಿ ಸಾಕಷ್ಟು ಮಾಹಿತಿ ಕಲೆಹಾಕ್ತಿದ್ದಾರೆ.
ಅಕ್ರಮದಲ್ಲಿ ಭಾಗಿಯಾದ ಮತ್ತಿಬ್ಬರ ಬಂಧನ
ಪಿಎಸ್ಐ ಪರೀಕ್ಷೆ ಅಕ್ರಮದಲ್ಲಿ ಭಾಗಿಯಾದ ಮತ್ತೆ ಇಬ್ಬರನ್ನು ಸಿಐಡಿ ತಂಡ ಬಂಧಿಸಿದೆ. ಅಭ್ಯರ್ಥಿ ವಿರೇಶ ಹಾಗೂ ಈತನಿಗೆ ಸಹಾಯ ಮಾಡಿದ್ದ ಅಫಜಲಪುರ ಮೂಲದ ಶರಣಬಸಪ್ಪ ಇಬ್ಬರನ್ನು ಬಂಧಿಸಿದ ಸಿಐಡಿ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇಲ್ಲಿಯವರೆಗೆ ಒಟ್ಟು ಬಂಧಿತರ ಸಂಖ್ಯೆ 12ಕ್ಕೆ ಏರಿಕೆ ಆದಂತಾಗಿದೆ
