ಮೈಸೂರು ಅರಸರಿಗೂ ರಾಜಮುಡಿ ಅಕ್ಕಿಗೂ ಇರೋ ನಂಟೇನು?

ಭಾರತದಲ್ಲಿ ಭತ್ತಕ್ಕೆ ಏಕದಳ ಧಾನ್ಯಗಳಲ್ಲಿ ಮೊದಲ ಸ್ಥಾನವಿದೆ. ಭಾರತದ ಬಹು ಮುಖ್ಯವಾದ ಆಹಾರ ಬೆಳೆ ಭತ್ತ. ಸಿಪ್ಪೆಯಿಂದ ಬೇರ್ಪಡಿಸಿದ್ರೆ ಅದು ಅಕ್ಕಿ ಎನಿಸಿಕೊಳ್ಳುತ್ತದೆ. ಇದರಲ್ಲಿ ಅನೇಕ ವಿಧಗಳಿವೆ. ಅದರಲ್ಲಿ ರಾಜಮುಡಿ ಎಂಬ ಅಕ್ಕಿಯೂ ಒಂದು. ಅಂದಾಗೆ ಈ ರಾಜಮುಡಿ ಅಕ್ಕಿಗೂ ಮೈಸೂರು ಅರಸರಿಗೂ ಒಂದು ಸಂಬಂಧವಿದೆ. ಅದೇನು ಅನ್ನೋದರ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.
ರಾಜಮುಡಿ..ಇದು ಒಂದು ರೀತಿಯ ಅಕ್ಕಿಯ ತಳಿ. ಅಂದಾಗೆ ಈ ಅಕ್ಕಿಗೂ ಮೈಸೂರು ಅರಸರಿಗೂ ಒಂದು ಅವಿನಾಭವ ನಂಟಿದೆ. ಅದು ಮೈಸೂರು ರಾಜರ ಆಳ್ವಿಕೆ ಕಾಲ. ಅವತ್ತಿಗೆ ನಮ್ಮ ರೈತರು ಭತ್ತ ಬೆಳೆದು ಅದನ್ನ ಕುಟ್ಟಿ ಮೇಲಿನ ಸಿಪ್ಪೆ ತೆಗೆದು ಬಳಿಕ ಅದನ್ನ ಮಾರಾಟ ಮಾಡುತ್ತಿದ್ದರು. ಭಾರತಕ್ಕೆ ಬ್ರಿಟೀಷರ ಆಗಮನವಾಗುವವರೆಗೂ ಈ ಪದ್ಧತಿ ಚಾಲ್ತಿಯಲ್ಲಿತ್ತು. ಇವತ್ತು ಕುಟ್ಟಿದ ಭತ್ತದ ಅನ್ನದ ರುಚಿಯನ್ನ ಸವಿದವರೇ ಬಲ್ಲರು. ಆದ್ರೆ ಇದೀಗ ಮೆಷಿನ್ ಗಳು ಬಂದಿರೋ ಕಾರಣ ಪಾಲಿಶ್ ಅಕ್ಕಿಗಳು ಮಾರುಕಟ್ಟೆಯಲ್ಲಿವೆ. ಆದ್ರೆ ಈ ಅಕ್ಕಿಗೂ ಕುಟ್ಟಿ ಮಾಡಿದ ಅಕ್ಕಿಯ ಅನ್ನಕ್ಕೂ ಸಾಕಷ್ಟು ರುಚಿ ಮತ್ತು ಪೋಷಾಕಾಂಶದಲ್ಲಿ ವ್ಯಾತ್ಯಾಸವಿದೆ. ಇದೇ ರೀತಿಯ ಅಕ್ಕಿ ಸಾಲಿಗೆ ಸಾರೋದು ಈ ರಾಜಮುಡಿ ಅಕ್ಕಿ. ಇಷ್ಟಕ್ಕೂ ಈ ಅಕ್ಕಿಗೆ ರಾಜಮುಡಿ ಎಂದು ಹೆಸರು ಬರೋಕೆ ಕಾರಣವೇನು ಅನ್ನೋದೆ ಇಂಟ್ರೆಸ್ಟಿಂಗ್
ಪಾಶ್ಚಿಮಾತ್ಯರು ಬರುವ ತನಕ ಸಹಜ ರೂಪದಲ್ಲಿ ಇದ್ದ ಅಕ್ಕಿ ನಂತ್ರ ಬಿಳಿ ಬಣ್ಣಕ್ಕೆ ತಿರುಗಿತು. ರೈಸ್ ಮಿಲ್ ಗಳು ತಲೆ ಎತ್ತಿದವು. ಬ್ರಿಟಿಷರು, ಅನ್ನವನ್ನ ವೈಟ್ ರೈಸ್ ಎನ್ನುತ್ತಿದ್ದರು. ಆಗಿನಿಂದ ಪಾಲಿಶ್ ಅಕ್ಕಿಯ ಬಳಕೆ ಶುರುವಾಯ್ತು. ಆದ್ರೆ ಅದಕ್ಕೂ ಇಂದೇ ಮೈಸೂರು ಸುತ್ತಮುತ್ತಲ ಪ್ರದೇಶಗಳಲ್ಲಿ ಕೆಂಪು ಅಕ್ಕಿಯನ್ನ ಬೆಳೆಯುತ್ತಿದ್ದರು. ಕುಟ್ಟಿ ಸಿಪ್ಪೆ ತೆಗೆದು ಮಾರಾಟ ಮಾಡುತ್ತಿದ್ದರು. ಈ ರೀತಿ ಬೆಳೆದ ಅಕ್ಕಿಯನ್ನ ತೆರಿಗೆ ರೂಪದಲ್ಲಿ ರಾಜರಿಗೆ ಕೊಡುತ್ತಿದ್ದರು. ಮೈಸೂರಿನ ಅರಸರು ಅದೊಮ್ಮೆ ಈ ಅಕ್ಕಿಯನ್ನ ಬಳಸಿ ಊಟ ಮಾಡಿದ್ರು. ಇದರ ರುಚಿ ಮೈಸೂರು ರಾಜರು ಮಾರುಹೋದರು.
ಕೆಂಪು ಅಕ್ಕಿ ತಳಿಯ ಅಕ್ಕಿ ವೈಟ್ ರೈಸ್ ಮುಂದೆ ವ್ಯಾಪಾರ ಡಲ್ ಆಗಿತ್ತು. ಕೆಂಪು ಅಕ್ಕಿ ಬೆಳೆಯುತ್ತಿದ್ದವರು, ತೆರಿಗೆ ಕಟ್ಟಲಾಗದೆ ಪರಿತಪಿಸುತ್ತಿದ್ದರು. ರೈತಾಪಿ ವರ್ಗದವರು ಮೈಸೂರು ಅರಸರ ಮುಂದೆ ಕಣ್ಣೀರು ಸುರಿಸಿದರು. ನಮ್ಮ ಅಕ್ಕಿಯನ್ನ ಯಾರು ಕೊಳ್ಳುತ್ತಿಲ್ಲ. ಹೀಗಾಗಿ ತೆರಿಗೆ ಕಟ್ಟಲಾಗುತ್ತಿಲ್ಲ ಎಂದರು. ಆಗ ರಾಜರು, ರೈತರ ಕಷ್ಟಕ್ಕೆ ಸ್ಪಂದಿಸಿ, ಅಕ್ಕಿಯನ್ನ ಖರೀದಿಸಿದರು.
ಹೌದು ಐದು ನೂರು ವರ್ಷದ ಹಿಂದೆ ಹಾಸನ ಜಿಲ್ಲೆಯ ರಾಮದೇವರ ಕಟ್ಟೆ ಪ್ರದೇಶದಲ್ಲಿ ಈ ತಳಿಯ ಭತ್ತ ಅಭಿವೃದ್ದಿ ಆಯಿತಂತೆ. ಈ ಭಾಗದ ರೈತರು ಆಗಿನ ಮೈಸೂರು ರಾಜರ ಆಳ್ವಿಕೆಯಲ್ಲಿದ್ದಾಗ ರಾಜರಿಗೆ ತೆರಿಗೆ ನೀಡಲು ವಿಫಲರಾದಾಗ ತಾವು ಬೆಳೆದ ರಾಜ ಮುಡಿ ಅಕ್ಕಿ ರಾಜರಿಗೆ ತೆರಿಗೆ ಆಗಿ ನೀಡಿದರು. ನಂತರ ಇದು ಪದ್ಧತಿ ಆಯಿತು ಮತ್ತು ರಾಜ ಪರಿವಾರ, ಸೈನಿಕರು ಹಾಗೂ ಕುಸ್ತಿ ಪಟುಗಳಿಗೆ ಈ ಅಕ್ಕಿ ಬೇಕೇ ಬೇಕಾದ್ದರಿಂದ ಮೈಸೂರು ಮಹಾರಾಜರಿಗಾಗಿಯೇ ಇದನ್ನು ಬೆಳೆದು ಸಮಪಿ೯ಸುತ್ತಿದ್ದರಿಂದಲೂ (ಮುಡಿಪಾಗಿ ಇಡುತ್ತಿದ್ದರಿಂದ) ರಾಜ ಮುಡಿ ಅಂತ ಹೆಸರು ಬಂತು ಅಂತಲೂ ಹೇಳುತ್ತಾರೆ.
ಇದನ್ನ ರಾಜಮನೆತನದವರು ಬಳಸಲು ಶುರು ಮಾಡಿದ್ದರಿಂದ ಇದಕ್ಕೆ ರಾಜಮುಡಿ ಅಂತ ಹೆಸರು ಬಂದಿದ್ದಷ್ಟೆ ಅಲ್ಲ, ಆರೋಗ್ಯ ದೃಷ್ಟಿಯಿಂದಲೂ ಇದು ಒಳ್ಳೆಯದಾಗಿದ್ದರಿಂದ ಡಿಮ್ಯಾಂಡ್ ಕ್ರಿಯೇಟ್ ಆಯ್ತು. ಮಾರುಕಟ್ಟೆಯಲ್ಲಿ ಈ ಅಪರೂಪದ ಅಕ್ಕಿಗೆ ಒಳ್ಳೆ ಬೆಲೆಯೂ ಬಂತು.
ಅಂದಾಗೆ ಈ ರಾಜಮುಡಿ ಅಕ್ಕಿ ಪಾಲಿಶ್ ಆಗಿರುವುದಿಲ್ಲ ಮತ್ತು ಇದು ಕೆಂಪು ಮತ್ತು ಕಂದು ಬಣ್ಣದ ಮಿಶ್ರಣದಲ್ಲಿ ಬರುತ್ತದೆ. ಒಂದು ಹಂತದಲ್ಲಿ, ಈ ಅಕ್ಕಿ ಹೆಚ್ಚು ಜನಪ್ರಿಯವಾಗಿತ್ತು ಮತ್ತು ನಂತರ ಬಿಳಿ ಅಕ್ಕಿ ಜನಪ್ರಿಯವಾಗುತ್ತಿದ್ದಂತೆ ಇದು ಮರೆಗೆ ಸರಿಯಿತು. ಸಾವಯವ ಮತ್ತು ಆರೋಗ್ಯಕರ ಅಕ್ಕಿಯ ಅರಿವು ಹೆಚ್ಚಾದಂತೆ, ಸಾಂಪ್ರದಾಯಿಕ ರಾಜಮುಡಿ ಅಕ್ಕಿ ಕೂಡ ಪ್ರಾಮುಖ್ಯತೆಯನ್ನು ಪಡೆಯಿತು.
ರಾಜಮುಡಿ ಅಕ್ಕಿಯ ಪ್ರಯೋಜನಗಳು
ಪೌಷ್ಠಿಕಾಂಶಗಳಿಂದ ಕೂಡಿದ ರಾಜಮುಡಿ ಅಕ್ಕಿ ದೈನಂದಿನ ಬಳಕೆಗೆ ಒಳ್ಳೆಯದು. ಪಾಲಿಶ್ ಮಾಡಲಾದ ಅಕ್ಕಿಗೆ ಹೋಲಿಸಿದರೆ ಇದು ಉತ್ತಮ ಆಹಾರದ ಫೈಬರ್ ಹೊಂದಿದೆ. ಇದರಲ್ಲಿ ಆಂಟಿ ಆಕ್ಸಿಡೆಂಟ್ಸ್ ಮತ್ತು ಫೈಟೊನ್ಯೂಟ್ರಿಯಂಟ್ಗಳಲ್ಲಿ ಸಮೃದ್ಧವಾಗಿದೆ. ಆಂಟಿ ಆಕ್ಸಿಡೆಂಟ್ಸ್ ನಮ್ಮ ದೇಹವನ್ನು ಸೋಂಕುಗಳು ಮತ್ತು ಫ್ರೀ ರ್ಯಾಡಿಕಲ್ಸ್ಗಳಿಂದ ತಡೆಯುತ್ತವೆ. ರಾಜಮುಡಿ ಅಕ್ಕಿಯಲ್ಲಿರುವ ಸತು ರೋಗ ನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ ಮತ್ತು ದೇಹದ ಚೇತರಿಕೆ ಮತ್ತು ಗುಣಮುಖಗೊಳ್ಳುವುದನ್ನು ವೇಗಗೊಳಿಸುತ್ತದೆ. ಇದು ಹೃದಯಕ್ಕೂ ಹಲವು ಪ್ರಯೋಜನಗಳನ್ನು ನೀಡುತ್ತದೆ. ಇದು ಅಪಧಮನಿಗಳಲ್ಲಿ ಸಂಗ್ರಹವಾಗುವ ದದ್ದನ್ನು ತೆಗೆದುಹಾಕುತ್ತದೆ. ರಾಜಮುಡಿ ಅಕ್ಕಿ ಮೂಳೆಗೆ ಬಲವನ್ನು ಒದಗಿಸಲು ಹೆಸರುವಾಸಿಯಾಗಿದೆ. ಇದು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಸಹ ಹೊಂದಿದೆ.



