
ಇಸ್ಲಾಮಾಬಾದ್ (ಪಾಕಿಸ್ತಾನ್): ಪಾಕಿಸ್ತಾನ್ ಮುಸ್ಲಿಂ ಲೀಗ್ನ ನವಾಜ್ (PMLN) ಅಧ್ಯಕ್ಷರಾದ ಶೆಹಬಾಜ್ ಷರೀಫ್ ಪಾಕಿಸ್ತಾನದ ಹೊಸ ಪ್ರಧಾನಿಯಾಗಿ ಸೋಮವಾರ ಸಂಸತ್ತಿನಲ್ಲಿ ಅವಿರೋಧವಾಗಿ ಆಯ್ಕೆಯಾದರು. ಪ್ರತಿಸ್ಪರ್ದಿ ಪಿಟಿಐ ಅಭ್ಯರ್ಥಿ ಶಾ ಹಮೂದ್ ಖುರೇಷಿ ಅವರು ಸಂಸತ್ತಿನಲ್ಲಿ ಮತದಾನವನ್ನು ಬಹಿಷ್ಕರಿಸಿ ವಾಕೌಟ್ ಮಾಡಿದ ನಂತರ ಪಾಕಿಸ್ತಾನದಲ್ಲಿ ಈ ಬೆಳವಣಿಗೆ ನಡೆದಿದೆ.
ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಖುರೇಷಿ ಚುನಾವಣೆಯನ್ನು ಬಹಿಷ್ಕರಿಸಿದ ನಂತರ ರೇಸ್ನಲ್ಲಿ 70 ವರ್ಷದ ಶೆಹಬಾಜ್ ಮಾತ್ರ ಉಳಿದಿದ್ದರು. ಮೂರು ಬಾರಿಯ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಕಿರಿಯ ಸಹೋದರ ಶೆಹಬಾಜ್ 174 ಮತಗಳನ್ನು ಸಂಸತ್ತಿನಲ್ಲಿ ಪಡೆದುಕೊಂಡಿದ್ದಾರೆ. ಸರಳ ಬಹುಮತಕ್ಕೆ 172 ಸಾಕು. ಶೆಹಬಾಜ್ ಪಾಕಿಸ್ತಾನದ 23ನೇ ಪ್ರಧಾನಿಯಾಗಿದ್ದಾರೆ.
ಶೆಹಬಾಜ್ ದೇಶದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮತ್ತು ರಾಜಕೀಯವಾಗಿ ನಿರ್ಣಾಯಕ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿ ಮೂರು ಬಾರಿ ಸೇವೆ ಸಲ್ಲಿಸಿದ್ದಾರೆ.




