ಆಕ್ಸಿಜನ್ ಸಿಗದೇ ಮಗು ಸಾವು: ರೊಚ್ಚಿಗೆದ್ದ ಪೋಷಕರು..!

ದಾವಣಗೆರೆ: ಆ್ಯಂಬುಲೆನ್ಸ್ ನಲ್ಲಿ ಆಕ್ಸಿಜನ್ ಇಲ್ಲದ ಹಿನ್ನೆಲೆಯಲ್ಲಿ ನವಜಾತ ಗಂಡು ಶಿಶು ಸಾವು ಕಂಡಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಪಟ್ಟಣ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಶೃಂಗಾರಬಾಬು ತಾಂಡಾದ ಹಾಲೇಶ್ ನಾಯ್ಕ್, ಸ್ವಾತಿ ದಂಪತಿಯ ಮಗು ಮೃತಪಟ್ಟಿದೆ. ರಾತ್ರಿ 2 ಗಂಟೆಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಸವಾಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಂಬಂಧಿಕರು ದಾಖಲಿಸಿದ್ದರು. ಬೆಳಗ್ಗೆ 7 ಗಂಟೆಗೆ ಹೆರಿಗೆಯಾಗಿದ್ದು, ಉಸಿರಾಟದ ತೊಂದರೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಹೊನ್ನಾಳಿ ಗೆ ಕರೆದೊಯ್ಯಲು ಪೋಷಕರು ಮುಂದಾಗಿದ್ದಾರೆ.
ಈ ವೇಳೆ ಆ್ಯಂಬುಲೆನ್ಸ್ ನಲ್ಲಿ ಆಕ್ಸಿಜನ್ ಇರಲಿಲ್ಲ, ಬೇರೊಂದು ಆಂಬುಲೆನ್ಸ್ ದಾರಿ ಮಧ್ಯೆ ಬರುತ್ತದೆ ಎಂದು ಆ್ಯಂಬುಲೆನ್ಸ್ ಚಾಲಕ ಕರೆದೊಯ್ದಿದ್ದಾನೆ. ಹೊನ್ನಾಳಿಗೆ ಹೋಗುವುದರೊಳಗೆ ಉಸಿರಾಟದ ತೊಂದರೆಯಾಗಿ ಮಗು ಸಾವನ್ನಪ್ಪಿದೆ. ಆಸ್ಪತ್ರೆಯ ಮುಂಭಾಗ ಮಗು ಮೃತದೇಹ ಇಟ್ಟು ಪೋಷಕರು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಬಸವಪಟ್ಟಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
