ಕಾಳಿಕಾದೇವಿ ಗುಡಿಯ 2.5 ಕೋಟಿ ರೂ. ಆಯ್ತಾ ಲೂಟಿ ?: ಆರೋಪ-ಪ್ರತ್ಯಾರೋಪಗಳ ಸುತ್ತ!

ಕಲಬುರಗಿ: ಜಿಲ್ಲೆಯ ವಿಶ್ವಕರ್ಮ ಸಮಾಜದಲ್ಲಿ ಭಾರಿ ಭ್ರಷ್ಟಾಚಾರ ನಡೆದಿರೋ ಆರೋಪ ಕೇಳಿ ಬಂದಿದೆ. ಕಾಳಿಕಾ ದೇವಿ ಮಂದಿರಕ್ಕೆ ಸಂಬಂಧಿಸಿದ ಹಣ, ದೇವಿಯ ಚಿನ್ನಾಭರಣ, ವಜ್ರ ಖಚಿತ ದೇವಿಯ ಕಿರೀಟ ಸೇರಿ ಸುಮಾರು 2.5 ಕೋಟಿ ಹಣ ದುರುಪಯೋಗ ಪಡಿಸಿಕೊಂಡಿರುವ ಗಂಭೀರ ಆರೋಪ ಕೇಳಿ ಬಂದಿದ್ದು, ಸಮಾಜದ ಎರಡು ಗುಂಪುಗಳ ಮಧ್ಯೆ ಅಧಿಕಾರಕ್ಕಾಗಿ ತಿಕ್ಕಾಟ ಶುರುವಾಗಿದೆ.
ಕಾಳಿಕಾ ದೇವಿ ದೇವಸ್ಥಾನದಲ್ಲಿ ಭಾರಿ ಭ್ರಷ್ಟಾಚಾರ, ಗೋಲ್ಮಾಲ್ ನಡೆದಿರುವ ಗಂಭೀರ ಆರೋಪದ ಹಿನ್ನಲೆ ಜಿಲ್ಲೆಯ ವಿಶ್ವಕರ್ಮ ಸಮಾಜದವರಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಅಂದಹಾಗೆ ವಿಶ್ವಕರ್ಮ ಸಮಾಜ ಸಂಘದ ಈಗಿನ ಆಡಳಿತ ಮಂಡಳಿ ಮತ್ತು ಹಿಂದಿನ ಆಡಳಿತ ಮಂಡಳಿ ಮಧ್ಯೆ ಅಧಿಕಾರಕ್ಕಾಗಿ ಜಂಘಿ ಕುಸ್ತಿ ಶುರುವಾಗಿದೆ. ನಗರದ ಸಂತ್ರಸವಾಡಿ ಬಡಾವಣೆಯಲ್ಲಿರುವ ಕಾಳಿಕಾ ದೇವಿ ಮಂದಿರದ ಜವಾಬ್ದಾರಿ ವಿಶ್ವಕರ್ಮ ಸಮಾಜ ಸಂಘ ನೋಡಿಕೊಳ್ಳುತ್ತಿದೆ. 2009 ರಿಂದ 2014 ರ ವರೆಗೆ ಆಡಳಿತ ನಡೆಸಿರುವ ಮಾಜಿ ಅಧ್ಯಕ್ಷ ಮಾಣಿಕರಾವ್ ಪೋದ್ದಾರ್ ನೇತೃತ್ವದ ಆಡಳಿತ ಅವಧಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆಯಂತೆ.
ಅಧಿಕಾರ ಅವಧಿ ಮುಗಿದ ಬಳಿಕವೂ ನೂತನ ಸದಸ್ಯರಿಗೆ ಅಧಿಕಾರ ಹಸ್ತಾಂತರ ಮಾಡದೆ, ಬ್ಯಾಂಕ್ ನಲ್ಲಿರುವ 60 ಸಾವಿರ ನಗದು ಮತ್ತು ಯುನಿಯನ್ ಬ್ಯಾಂಕ್ ಲಾಕರ್ ನಲ್ಲಿಟ್ಟಿದ್ದ ದೇವಿಯ ಚಿನ್ನಾಭರಣ, ವಜ್ರ ಖಚಿತ ಕಿರೀಟ ಸೇರಿ ಸುಮಾರು 2.5 ಕೋಟಿಯಷ್ಟು ಹಣ ಗೋಲ್ಮಾಲ್ ಮಾಡಲಾಗಿದೆ ಅಂತಾ ಅವಿರೋಧವಾಗಿ ಆಯ್ಕೆಯಾಗಿರುವ ನೂತನ ಅಧ್ಯಕ್ಷ ಪ್ರಕಾಶ ಸುತಾರ ನೇತೃತ್ವದ ಆಡಳಿತ ಮಂಡಳಿ ಸದಸ್ಯರು ಗಂಭೀರ ಆರೋಪ ಮಾಡುತ್ತಿದ್ದಾರೆ.
2014 ರಲ್ಲಿ ಚುನಾವಣಾ ನಡೆದ ಬಳಿಕ ಹಾಲಿ ಮತ್ತು ಮಾಜಿ ಆಡಳಿತ ಮಂಡಳಿ ಅಧ್ಯಕ್ಷರು ಮತ್ತು ಸದಸ್ಯರ ಮಧ್ಯೆ ಅಧಿಕಾರಕ್ಕಾಗಿ ಜಂಘಿ ಕುಸ್ತಿ ಶುರುವಾಗಿದೆ. ಭಾರಿ ಭ್ರಷ್ಟಾಚಾರದ ಆರೋಪವನ್ನು ಮಾಜಿ ಅಧ್ಯಕ್ಷ ಮಾಣಿಕರಾವ್ ನೇತೃತ್ವದ ಆಡಳಿತ ಮಂಡಳಿ ಅಲ್ಲಗಳೆದಿದೆ. ನ್ಯಾಯ ಬದ್ದವಾಗಿ ಚುನಾವಣೆ ನಡೆದಿಲ್ಲ. ಹೀಗಾಗಿ ನಾವು ಅಧಿಕಾರ ಹಸ್ತಾಂತರ ಮಾಡಿಲ್ಲ. ದೇವಸ್ಥಾನದ ಹಣ, ದೇವಿಯ ಆಭರಣಗಳೆಲ್ಲವೂ ಬ್ಯಾಂಕ್ ಲಾಕರ್ ನಲ್ಲಿಯೇ ಇವೆ. ಎಲ್ಲಾ ಲೆಕ್ಕ ಪತ್ರಗಳು ಸರಿಯಾಗಿವೆ. ಯಾವುದೇ ಭ್ರಷ್ಟಾಚಾರ , ಹಣ ದುರುಪಯೋಗ ಮಾಡಿಕೊಂಡಿಲ್ಲ. ಮಾಡುತ್ತಿರುವ ಆರೋಪಗಳೆಲ್ಲ ಸಂಪೂರ್ಣ ಸುಳ್ಳು. ಇಲ್ಲಸಲ್ಲದ ಸುಳ್ಳು ಆರೋಪ ಮಾಡಿದವರ ವಿರುದ್ಧ ನಾವು ಕಾನೂನು ಕ್ರಮಕ್ಕೆ ಮುಂದಾಗ್ತೇವೆ ಅಂತಾ ಮಾಜಿ ಅಧ್ಯಕ್ಷ ಮಾಣಿಕರಾವ್ ಆರೋಪಗಳನ್ನು ತಳ್ಳಿಹಾಕಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
