ಪಂಜಾಬ್ ಗೆ ಚಂಡೀಗಢ ವರ್ಗಾವಣೆ ವಿಚಾರ: ಹರಿಯಾಣ ಸಿಎಂ ಅಸಮಾಧಾನ

ಚಂಡೀಗಢ: ಪಂಜಾಬ್ಗೆ ಚಂಡೀಗಢವನ್ನು ವರ್ಗಾಯಿಸುವ ನಿರ್ಣಯದ ಬಗ್ಗೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಎಪಿ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಹರಿಯಾಣದ ಜನರಲ್ಲಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಜಾಬ್ಗೆ ಚಂಡೀಗಢವನ್ನು ವರ್ಗಾಯಿಸುತ್ತಿರುವುದು ಖಂಡನೀಯ ಮತ್ತು ಅವರು ಹೀಗೆ ಮಾಡಬಾರದಿತ್ತು. ಚಂಡೀಗಢವು ಹರಿಯಾಣ ಮತ್ತು ಪಂಜಾಬ್ನ ರಾಜಧಾನಿಯಾಗಿದೆ. ಹೀಗಾಗಿ ಕೇಜ್ರಿವಾಲ್ ಇದನ್ನು ಖಂಡಿಸಬೇಕು ಮತ್ತು ಹರಿಯಾಣದ ಜನರಲ್ಲಿ ಕ್ಷಮೆಯಾಚಿಸಬೇಕು. ಜೊತೆಗೆ ಭಗವಂತ್ ಮಾನ್ ಅವರು ಕೂಡ ಕ್ಷಮೆ ಕೇಳಬೇಕು ಎಂದು ತಿಳಿಸಿದ್ದಾರೆ.
ಪಂಜಾಬ್ನಲ್ಲಿ ಎಎಪಿ ನೇತೃತ್ವದ ಸರ್ಕಾರವು ಮೊದಲು ಸಟ್ಲೆಜ್ ಯಮುನಾ ಲಿಂಕ್ ಕಾಲುವೆ ಸಮಸ್ಯೆಯನ್ನು ಪರಿಹರಿಸುವ ಕುರಿತು ಸುಪ್ರೀಂ ಕೋರ್ಟ್ಗೆ ಹೋಗಬೇಕು. ಹಿಂದಿ ಮಾತನಾಡುವ ಪ್ರದೇಶಗಳನ್ನು ಹರಿಯಾಣಕ್ಕೆ ನೀಡಲಿಲ್ಲ, ಇದು ಉಳಿದ ಸಮಸ್ಯೆಗಳನ್ನು ವಿಳಂಬಗೊಳಿಸಿತು. ಹರಿಯಾಣಕ್ಕೆ ಹಿಂದಿ ಭಾಷಿಕ ಪ್ರದೇಶಗಳನ್ನು ನೀಡಲು ಸಿದ್ಧ ಅಂತ ಹೇಳಬೇಕು ಎಂದು ಖಟ್ಟರ್ ಹೇಳಿದ್ದಾರೆ.
