Breaking NewsLatestಜಿಲ್ಲಾ ಸುದ್ದಿದಾವಣಗೆರೆ

ಕುದುರೆಕೊಂಡ ಗ್ರಾಮದ ಬಳಿ ಗಾಂಜಾ ಪತ್ತೆ: ಆರೋಪಿಗಳು ಪರಾರಿ…!

ದಾವಣಗೆರೆ: ನ್ಯಾಮತಿ ತಾಲ್ಲೂಕಿನ ಕುದುರೆಕೊಂಡ ಗ್ರಾಮದ ಬಳಿ ಜಮೀನಿನಲ್ಲಿ ಒಣ ಗಾಂಜಾ ಹಾಗೂ ಅಡಿಕೆ ತೋಟವೊಂದರಲ್ಲಿ ಬೆಳೆದಿದ್ದ ಗಾಂಜಾ ಗಿಡಗಳಿಂದ ಹಸಿ ಗಾಂಜಾವನ್ನು ಅಬಕಾರಿ ಇಲಾಖೆ ಪತ್ತೆ ಮಾಡಿ, ಜಪ್ತಿ ಮಾಡಿದೆ. ಆದ್ರೆ, ಆರೋಪಿಗಳು ಮಾತ್ರ ಸಿಕ್ಕಿಲ್ಲ.
ಆರೋಪಿಗಳ ಪತ್ತೆಗೆ ಅಬಕಾರಿ ಇಲಾಖೆ ಬಲೆ ಬೀಸಿದೆ. ಅಬಕಾರಿ ಇಲಾಖೆ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ, ಹೊನ್ನಾಳಿ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ನ್ಯಾಮತಿ ತಾಲ್ಲೂಕು ಕುದುರೆಕೊಂಡ ಗ್ರಾಮದ ರುದ್ರಪ್ಪ ಅವರಿಗೆ ಸೇರಿದ ಜಮೀನಿನಲ್ಲಿ ದಾಳಿ ನಡೆಸಿ ಶೋಧಿಸಿದ ಸಂದರ್ಭದಲ್ಲಿ ಮೆಕ್ಕೆಜೋಳದ ದಿಂಡು ಸಂಗ್ರಹಿಸಿದ ಸ್ಥಳದಲ್ಲಿ ಬಕೆಟ್ ಒಂದರಲ್ಲಿ ಗಾಂಜಾ ಎಲೆ, ಗಾಂಜಾ ತೆನೆಯ ಪುಡಿ ಹಾಗೂ ಗಾಂಜಾ ಬೀಜಗಳ ಮಿಶ್ರಿತ ಒಟ್ಟು 268 ಗ್ರಾಂ ನಷ್ಟು ಒಣ ಗಾಂಜಾ ಪತ್ತೆಯಾಗಿದ್ದು ಜಪ್ತಿ ಮಾಡಿಕೊಂಡು, ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಇದೇ ಗ್ರಾಮದ ಲಕ್ಷ್ಮಪ್ಪ ಅವರಿಗೆ ಸೇರಿದ ಅಡಿಕೆ ತೋಟದಲ್ಲಿ ಗಾಂಜಾ ಗಿಡಗಳನ್ನು ಅಕ್ರಮವಾಗಿ ಬೆಳೆದಿರುವುದು ಕಂಡುಬಂದಿದ್ದು, ಸುಮಾರು 134 ಗ್ರಾಂ ನಷ್ಟು ಹಸಿ ಗಾಂಜಾವನ್ನು ಜಪ್ತಿ ಮಾಡಿಕೊಂಡು, ಪ್ರಕರಣ ದಾಖಲಿಸಲಾಗಿದೆ. ಆರೋಪಿ ನಾಪತ್ತೆಯಾಗಿದ್ದು ತನಿಖೆ ಮುಂದುವರೆದಿದೆ. ಹೀಗೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 268 ಗ್ರಾಂ ಒಣ ಗಾಂಜಾ ಮತ್ತು 134 ಗ್ರಾಂ ಹಸಿ ಗಾಂಜಾ ವಶಕ್ಕೆ ಪಡೆದಿದ್ದು, ಒಟ್ಟು 4500 ರೂ. ಗಳ ಅಂದಾಜು ಮೌಲ್ಯ ಮಾಡಲಾಗಿದೆ.
ಹೊಸಪೇಟೆ ವಿಭಾಗದ ಅಬಕಾರಿ ಜಂಟಿ ಆಯುಕ್ತರ ನಿರ್ದೇಶನದಂತೆ, ಅಬಕಾರಿ ಉಪ ಆಯುಕ್ತ ಬಿ. ಶಿವಪ್ರಸಾದ್ ಮಾರ್ಗದರ್ಶನದಲ್ಲಿ ಅಬಕಾರಿ ಉಪ ಅಧೀಕ್ಷಕ ಎಸ್.ಆರ್. ಮುರುಡೇಶ್ ಹಾಗೂ ಅಬಕಾರಿ ನಿರೀಕ್ಷಕ ಗಿರೀಶ್ ಹೆಚ್.ಕೆ. ಅವರು ದಾಳಿಯಲ್ಲಿ ಪಾಲ್ಗೊಂಡಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button